ADVERTISEMENT

ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ವಿಶೇಷ ಕಾಳಜಿ ವಹಿಸಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:10 IST
Last Updated 29 ಜುಲೈ 2024, 16:10 IST
ಚಿತ್ರ ಭಾಲ್ಕಿಯ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು
ಚಿತ್ರ ಭಾಲ್ಕಿಯ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು   

ಭಾಲ್ಕಿ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ಖಂಡ್ರೆ ಸೂಚನೆ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ವಿಶೇಷ ಕಾಳಜಿ ವಹಿಸಿ ಪ್ರಜಾವಾಣಿ ವಾರ್ತೆ

ಭಾಲ್ಕಿ: ತಾಲ್ಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆಯಲ್ಲಿ ಫೇಲಾದರೆ ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಎಲ್ಲಾ ವರ್ಗದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಳವಾಗಬೇಕು. ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲೂ ಹೆಚ್ಚಳವಾಗಬೇಕು. ಇದಕ್ಕಾಗಿ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳ ವಿಶೇಷ ಪರಿಹಾರ ಬೋಧನೆ ಆರಂಭಿಸಬೇಕು ಎಂದು ತಿಳಿಸಿದರು. ಇನ್ನು ವಿದ್ಯಾರ್ಥಿಗಳ ಕಲಿಕಾ ಮಟ್ಟ ಅಳೆಯಲು ರೂಪಣಾತ್ಮಕ ಪರೀಕ್ಷೆ -1ರ ಫಲಿತಾಂಶ ಪರಿಶೀಲನೆಗೆ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿಕೊಂಡು ಶಾಲೆಗಳಿಗೆ ಭೇಟಿ ನೀಡಲು ಸೂಚಿಸಿದರು. ಅಧಿಕಾರಿಗಳು ಯಾವುದೇ ಸಬೂಬು, ನೆಪ ಹೇಳದೆ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕು. ತಾಲ್ಲೂಕಿನಲ್ಲಿ ನೀರಾವರಿ ಯೋಜನೆ, ಕೃಷಿ, ತೋಟಗಾರಿಕೆ, ಶಿಕ್ಷಣ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿ ವಿವಿಧ ಯೋಜನೆಗಳಿಗೆ ಕೋಟಿಗಟ್ಟಲೇ ಅನುದಾನ ನೀಡಲಾಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೀರಾವರಿ ಪ್ರದೇಶ ಹೆಚ್ಚಿಸಲು ಬ್ರಿಜ್ ಕಂ ಬ್ಯಾರೇಜ್, ಬಾಂದರ, ಕೆರೆ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಲಾಗುತ್ತಿದೆ. ಆದರೂ ಇವುಗಳಲ್ಲಿ ಸಮರ್ಪಕ ನೀರು ನಿಲುಗಡೆ ಆಗುತ್ತಿಲ್ಲ. ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಏಕೆ ಯೋಚನೆ ಮಾಡುತ್ತಿಲ್ಲ. ಸರ್ಕಾರದ ಹಣ ಏಕೆ ಪೋಲು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಹೀಗಾದಂತೆ ಅಧಿಕಾರಿಗಳು ಎಚ್ಚರವಹಿಸಿ ಅರ್ಧಕ್ಕೆ ನಿಂತ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಪ್ರಕಾಶ ಕುದುರೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ತಹಶೀಲ್ದಾರ್ ಮಲಿಕಾರ್ಜುನ ವಡ್ಡನಕೇರೆ, ತಾಲ್ಲೂಕು ಪಂಚಾಯಿತಿ ಇಓ ಸೂರ್ಯಕಾಂತ ಬಿರಾದಾರ, ಎಡಿ ಚಂದ್ರಶೇಖರ ಬನ್ನಾಳೆ ಇದ್ದರು.

-----------------------------

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.