
ಭಾಲ್ಕಿ: ಅಪಾರ ಜನಸ್ತೋಮ ಹಾಗೂ ಬಸವ ಮಂತ್ರದ ನಡುವೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರೂ ಆದ ಮಾಜಿ ಸಚಿವ ಭೀಮಣ್ಣ ಖಂಡ್ರೆ (102) ಅವರ ಅಂತ್ಯಸಂಸ್ಕಾರ ಪಟ್ಟಣ ಹೊರವಲಯದ ಚಿಕಲಚಂದಾ ಸಮೀಪದ ಶಾಂತಿಧಾಮದಲ್ಲಿ ಶನಿವಾರ ಸಂಜೆ ನೆರವೇರಿತು.
ಸಂಜೆ 6ರಿಂದ 7 ಗಂಟೆಯ ನಡುವೆ ಹೊತ್ತು ಮುಳುಗುವ ಸಮಯದಲ್ಲಿ ಬಸವ ಮಂತ್ರ, ವಚನ ಪಠಣದ ನಡುವೆಯೇ ವಿಭೂತಿ ಸಂಸ್ಕಾರದಿಂದ ‘ಲೋಕನಾಯಕ’ ಖ್ಯಾತಿಯ ಖಂಡ್ರೆ ಅವರನ್ನು ಬೀಳ್ಕೊಡಲಾಯಿತು. ವಿಭೂತಿ, ಹೂ, ಪತ್ರಿ ಹಾಗೂ ರುದ್ರಾಕ್ಷಿಯೊಂದಿಗೆ ಸಂಸ್ಕಾರ ನೆರವೇರಿಸಲಾಯಿತು. ಪತ್ನಿ ಲಕ್ಷ್ಮೀಬಾಯಿ ಅವರ ಸಮಾಧಿ ಸ್ಥಳದಲ್ಲಿಯೇ ಭೀಮಣ್ಣ ಖಂಡ್ರೆ ಅವರು ಸಮಾಧಿಯಾದರು. ಇದರೊಂದಿಗೆ ಖಂಡ್ರೆ ಪರಿವಾರದ ದೊಡ್ಡ ನೆರಳೊಂದು ಕಣ್ಮರೆಯಾಯಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ವೀರಶೈವ ಲಿಂಗಾಯತದ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಇದಕ್ಕೆ ರಾಜ್ಯದ ವಿವಿಧ ಭಾಗದ ಮಠಾಧೀಶರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವೀರಶೈವ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು, ಕಾರ್ಯಕರ್ತರು, ಲಿಂಗಾಯತ ಸೇರಿದಂತೆ ಇತರೆ ಸಮಾಜದವರು ಸಾಕ್ಷಿಯಾದರು.
ಹರಿದು ಬಂದ ಜನ: ಭೀಮಣ್ಣ ಖಂಡ್ರೆ ಅವರ ನಿಧನದ ವಿಷಯ ತಿಳಿದು ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಜನ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಪಟ್ಟಣಕ್ಕೆ ಬಂದರು.
ಬೆಳಿಗ್ಗೆ ಖಂಡ್ರೆ ಅವರ ಮನೆಯಲ್ಲಿ ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಇದಕ್ಕೆ ಸಚಿವ ಈಶ್ವರ ಬಿ. ಖಂಡ್ರೆ, ಅವರ ಸಹೋದರ ಅಮರಕುಮಾರ್ ಖಂಡ್ರೆ, ಸಂಸದ ಸಾಗರ ಖಂಡ್ರೆ, ಡಾ. ಗುರುಪ್ರಸಾದ್ ಖಂಡ್ರೆ ಹಾಗೂ ಇತರೆ ಕುಟುಂಬದ ಸದಸ್ಯರು ಜೊತೆಯಾದರು. ಆರತಿ ಬೆಳಗಿ, ನಮಸ್ಕರಿಸಿದರು.
ಬಳಿಕ ಭೀಮಣ್ಣ ಖಂಡ್ರೆ ಅವರ ಪಾರ್ಥೀವ ಶರೀರವವನ್ನು ತ್ರಿವರ್ಣ ಧ್ವಜದಲ್ಲಿ ಅವರ ಮನೆಗೆ ಹೊಂದಿಕೊಂಡಿರುವ ವಿಶಾಲ ಜಾಗದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಜನ ಸರತಿ ಸಾಲಿನಲ್ಲಿ ತಡಹೊತ್ತು ನಿಂತು ದರ್ಶನ ಪಡೆದರು. ವಿವಿಧ ಮಠಾಧೀಶರು, ಸಚಿವರು, ಶಾಸಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ದರ್ಶನ ಪಡೆದು, ಖಂಡ್ರೆ ಅವರಿಗೆ ನುಡಿನಮನದ ಮೂಲಕ ಗೌರವ ಸಲ್ಲಿಸಿದರು. ನಡು ನಡುವೆ ಭಜನಾ ತಂಡದವರು ಭಜನಾ ಗೀತೆಗಳನ್ನು ಹಾಡಿದರು.
ಮಧ್ಯಾಹ್ನ 3ಗಂಟೆಗೆ ಖಂಡ್ರೆ ಗಲ್ಲಿಯಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಆರಂಭಗೊಂಡ ಮೆರವಣಿಗೆಯು ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಬೊಮ್ಮಗೊಂಡೇಶ್ವರ ವೃತ್ತ, ಹುಮನಾಬಾದ್ ರಸ್ತೆ, ಬಿಕೆಐಟಿ ಮಾರ್ಗವಾಗಿ ಚಿಕಲಚಂದಾ ರಸ್ತೆ ಸಮೀಪದ ತೋಟದ ಮನೆಯಲ್ಲಿರುವ ಶಾಂತಿಧಾಮದ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಅಸಂಖ್ಯ ಜನ ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.