ADVERTISEMENT

ಬೀದರ್‌ | ನಿತ್ಯ ಯೋಗ, ಮನೆಯೂಟವೇ ಭೀಮಣ್ಣ ಖಂಡ್ರೆ ಆರೋಗ್ಯದ ಗುಟ್ಟು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:15 IST
Last Updated 14 ಜನವರಿ 2026, 5:15 IST
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಭೀಮಣ್ಣ ಖಂಡ್ರೆ ಅವರ ಯೋಗಕ್ಷೇಮದ ಕುರಿತು ಸಚಿವ ಈಶ್ವರ ಬಿ. ಖಂಡ್ರೆ ಅವರಿಂದ ಮಾಹಿತಿ ಪಡೆದರು
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಭೀಮಣ್ಣ ಖಂಡ್ರೆ ಅವರ ಯೋಗಕ್ಷೇಮದ ಕುರಿತು ಸಚಿವ ಈಶ್ವರ ಬಿ. ಖಂಡ್ರೆ ಅವರಿಂದ ಮಾಹಿತಿ ಪಡೆದರು   

ಬೀದರ್‌: ನಿತ್ಯ ಯೋಗಾಭ್ಯಾಸ, ಶುದ್ಧ ಸಸ್ಯಾಹಾರದ ಮನೆಯೂಟ... ಮಾಜಿಸಚಿವ ಭೀಮಣ್ಣ ಖಂಡ್ರೆ ಅವರ ಬದುಕಿನ ಭಾಗ.

ಇದೇ ಅವರನ್ನು ದೀರ್ಘಾಯುಷ ಕಲ್ಪಿಸಿದೆ ಎನ್ನುತ್ತಾರೆ ಅವರನ್ನು ಬಹಳ ಹತ್ತಿರದಿಂದ ಬಲ್ಲವರು. ಅವರ ಆರೋಗ್ಯದ ಕುರಿತು ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ವಿಷಯ ಪ್ರಾಮುಖ್ಯ ಪಡೆದಿದೆ.

ನಿತ್ಯ ಯೋಗಾಭ್ಯಾಸ, ಸ್ನಾನ ಮಾಡಿ, ಇಷ್ಟಲಿಂಗ ಪೂಜೆ ಮಾಡುವುದರೊಂದಿಗೆ ಅವರ ದಿನಚರಿ ಆರಂಭವಾಗುತ್ತದೆ. ಬಸವಾದಿ ಶರಣರ ವಿಚಾರಧಾರೆಗಳಿಂದ ಬಹಳಷ್ಟು ಪ್ರಭಾವಿತರಾದ ಅವರು ಸರಳ, ಸಾತ್ವಿಕವಾದ ಜೀವನ ಶೈಲಿ ರೂಢಿಸಿಕೊಂಡು ಪಾಲಿಸಿದರು. ಎಲ್ಲೇ ಇರಲಿ ಮನೆಯೂಟ ತರಿಸಿಕೊಂಡು ಅದನ್ನೇ ಸೇವಿಸುತ್ತ ಬಂದವರು. ಮೇಲಿಂದ ಮಿತ ಆಹಾರ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಎಂದೂ ಸೇವಿಸಿರಲಿಲ್ಲ. ಯಾವಾಗಲಾದರೂ ಒಮ್ಮೆ ತುಪ್ಪದಲ್ಲಿ ಮಾಡಿದ ಉಪ್ಪಿಟ್ಟು ಹೇಳಿ ಮಾಡಿಸಿ, ಇಷ್ಟಪಟ್ಟು ತಿನ್ನುವುದನ್ನು ಕಂಡಿದ್ದೇವೆ ಎನ್ನುತ್ತಾರೆ ಅವರ ಗುಣಸ್ವಭಾವವನ್ನು ಹತ್ತಿರದಿಂದ ಬಲ್ಲವರು.

ADVERTISEMENT

‘ಮುಚಳಂಬದ ನಾಗಭೂಷಣ ಸ್ವಾಮೀಜಿ ಅವರಿಂದ ಯೋಗ ಶಿಕ್ಷಣ ಪಡೆದ ಅವರು, ಅದನ್ನು ನಿತ್ಯ ಮಾಡುವರು. ಬಳಿಕ ಸ್ನಾನಮಾಡಿ, ಇಷ್ಟಲಿಂಗ ಪೂಜೆ. ಆನಂತರ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ತರಕಾರಿ, ಬಿಳಿ ಜೋಳದ ರೊಟ್ಟಿ, ಹಣ್ಣುಗಳು, ಡ್ರೈಫ್ರುಟ್ಸ್‌ ಹೆಚ್ಚಾಗಿ ಸೇವಿಸುವುದು ರೂಢಿ. ಕಟ್ಟಡಗಳಿಗೆ ಲಿಫ್ಟ್‌ ಇದ್ದರೂ ಮೆಟ್ಟಿಲುಗಳಲ್ಲಿ ನಡೆದೇ ಹೋಗುವ ರೂಢಿ. ಸರಳ ಸಾತ್ವಿಕ ಬದುಕಿನ ಶೈಲಿ ಅವರನ್ನು ದೀರ್ಘಾಯುಷಿ ಮಾಡಿದೆ’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ನೋಡಿರುವ ಹಿರಿಯ ಸಾಹಿತಿ ವೈಜಿನಾಥ ಭಂಡೆ.

ಯಾವುದೇ ರೀತಿಯ ಕೆಟ್ಟ ಹವ್ಯಾಸ, ಚಟ ಇರಲಿಲ್ಲ. ಶುದ್ಧ ಚಾರಿತ್ರ್ಯ. ಎಲ್ಲರನ್ನೂ ಗೌರವಿಸಿ ಮಾತನಾಡುವುದು. ಜನರಿಗೆ ಸಮಯ ಮೀಸಲಿಟ್ಟು, ಅವರ ಸಮಸ್ಯೆ ಆಲಿಸಿ, ಸೂಕ್ತವೆನಿಸಿದರೆ ಹೋರಾಡಿಯಾದರೂ ನ್ಯಾಯ ಒದಗಿಸಿಕೊಡುವ ವಿಶೇಷ ಗುಣ ಅವರದು ಎಂದರು.

ಎಲ್ಲೇ ಹೋದರೂ ಮನೆಯೂಟಕ್ಕೆ ಹೆಚ್ಚಿನ ಪ್ರಾಧ್ಯಾನತೆ. ಅದರಲ್ಲೂ ಬಿಳಿಜೋಳದ ರೊಟ್ಟಿ ಇಷ್ಟಪಡುವರು. ಅನ್ನ ಸೇವನೆ ಬಹಳ ಕಡಿಮೆ. ಋತುಗಳಿಗೆ ತಕ್ಕಂತೆ ದೇಸಿ ಆಹಾರ ಸೇವಿಸುವುದು. ಯುವಕರು ನಾಚಿಸುವ ರೀತಿಯಲ್ಲಿ ವೇಗವಾಗಿ ನಡೆಯುವುದು. ಆರೋಗ್ಯಕ್ಕೆ ಹೆಚ್ಚಿನ ಮಹತ್ವ. ಯೋಗವಂತೂ ಒಂದು ದಿನವೂ ತಪ್ಪಿಸುವವರಲ್ಲ. ಇದು ಅವರ ಆರೋಗ್ಯದ ಗುಟ್ಟು ಎನ್ನುತ್ತಾರೆ ಇನ್ನೊಬ್ಬ ಹಿರಿಯ ಸಾಹಿತಿ ಶಂಭುಲಿಂಗ ಕಾಮಣ್ಣ.

ಭೀಮಣ್ಣ ಖಂಡ್ರೆಯವರ ಆರೋಗ್ಯದ ಕುರಿತು ತಿಳಿಯಲು ಅವರ ಭಾಲ್ಕಿಯ ಮನೆ ಎದುರು ಮಂಗಳವಾರ ಸೇರಿದ್ದ ಜನ
ವಿವಿಧ ಮಠಾಧೀಶರು ಮುಖಂಡರು ಭಾಲ್ಕಿಯಲ್ಲಿರುವ ಭೀಮಣ್ಣ ಖಂಡ್ರೆಯವರ ನಿವಾಸಕ್ಕೆ ಮಂಗಳವಾರ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದರು
ವೈಜಿನಾಥ ಭಂಡೆ
ಶಂಭುಲಿಂಗ ಕಾಮಣ್ಣ
ಭೀಮಣ್ಣ ಖಂಡ್ರೆ ಅವರು ರೈಲು ಸೇರಿದಂತೆ ಎಲ್ಲೇ ಇದ್ದರೂ ನಿತ್ಯ ಯೋಗ ಇಷ್ಟಲಿಂಗಪೂಜೆ ಮಾಡುವ ರೂಢಿ. ಕೆಟ್ಟ ಹವ್ಯಾಸಗಳು ಇಲ್ಲ.
ವೈಜಿನಾಥ ಭಂಡೆ, ಹಿರಿಯ ಸಾಹಿತಿ
Quote - ಯೋಗ ಭೀಮಣ್ಣ ಖಂಡ್ರೆಯವರ ಜೀವನದ ಅವಿಭಾಜ್ಯ ಅಂಗ. ಶುದ್ಧ ಸಸ್ಯಾಹಾರಿಯಾಗಿ ಮಿತ ಆಹಾರ ಸೇವನೆ ರೂಢಿಸಿಕೊಂಡಿರುವರು.
ಶಂಭುಲಿಂಗ ಕಾಮಣ್ಣ ಹಿರಿಯ ಸಾಹಿತಿ

ಮಠಾಧೀಶರು ಗಣ್ಯರ ದಂಡು ಭೀಮಣ್ಣ ಖಂಡ್ರೆಯವರ ಯೋಗಕ್ಷೇಮ ಆರೋಗ್ಯ ವಿಚಾರಿಸಲು ಮಂಗಳವಾರವೂ ಅವರ ಭಾಲ್ಕಿ ನಿವಾಸಕ್ಕೆ ರಾಜ್ಯದ ವಿವಿಧ ಭಾಗಗಳ ಮಠಾಧೀಶರು ರಾಜಕಾರಣಿಗಳು ಸಂಘ ಸಂಸ್ಥೆಗಳ ಪ್ರಮುಖರು ಸಾರ್ವಜನಿಕರು ಭೇಟಿ ನೀಡಿದರು. ಬೆಳಕು ಹರಿಯುತ್ತಿದ್ದಂತೆ ಆರಂಭಗೊಂಡ ಜನರ ಭೇಟಿ ರಾತ್ರಿವರೆಗೆ ನಡೆದೇ ಇತ್ತು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾರಕೂಡದ ಚನ್ನವೀರ ಶಿವಾಚಾರ್ಯರು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಗುರುಬಸವ ಪಟ್ಟದ್ದೇವರು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮುಗುಳಖೋಡ-ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹುಡುಗಿ– ಹಿರೇನಾಗಾಂವ್‌ ಸ್ವಾಮೀಜಿ ಸೇರಿ ಪೌರಾಡಳಿತ ಸಚಿವ ರಹೀಂ ಖಾನ್ ಶಾಸಕ ಎಂ.ವೈ. ಪಾಟೀಲ್‌ ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ ಮುಖಂಡರಾದ ಡಿ.ಕೆ. ಸಿದ್ರಾಮ ಗುರುನಾಥ ಕೊಳ್ಳೂರು ಸೇರಿದಂತೆ ಇನ್ನಿತರರು ಭೇಟಿ ಕೊಟ್ಟು ಅಲ್ಲಿಯೇ ಇದ್ದ ಸಚಿವ ಈಶ್ವರ ಬಿ. ಖಂಡ್ರೆ ಅವರೊಂದಿಗೆ ಸಮಾಲೋಚಿಸಿದರು.

ವದಂತಿಗಳ ಕಾರುಬಾರು ಸುಳ್ಳು ಸುದ್ದಿ ಭೀಮಣ್ಣ ಖಂಡ್ರೆ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೋಮವಾರ ತಡರಾತ್ರಿ ವರೆಗೆ ವದಂತಿ ಸುಳ್ಳು ಸುದ್ದಿಗಳು ವಿಜೃಂಭಿಸಿದವು. ಅನೇಕರು ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನಮನ ಸಂತಾಪ ಗೌರವ ಎಂಬಿತ್ಯಾದಿ ಪೋಸ್ಟ್‌ಗಳನ್ನು ಮಾಡಿದರು. ವಾಟ್ಸ್ಯಾಪ್‌ ಸ್ಟೇಟಸ್‌ ಇಟ್ಟುಕೊಂಡಿದ್ದರು. ಕೆಲ ಮಾಧ್ಯಮಗಳಲ್ಲೂ ಸುಳ್ಳು ಸುದ್ದಿ ಪ್ರಕಟಗೊಂಡಿತು. ಆನಂತರ ವಿಷಯ ಸುಳ್ಳೆಂಬುದು ಮನದಟ್ಟಾದ ನಂತರ ಅಳಿಸಿ ಹಾಕಿದರು. ‘ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ವದಂತಿಗಳಿಗೆ ಜನ ಕಿವಿಗೊಡಬಾರದು. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು ಆರೋಗ್ಯ ಸ್ಥಿರವಾಗಿದೆ. ತಂದೆಯವರ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು ಅದಕ್ಕೆ ಕಿವಿಗೊಡಬಾರದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದರು.

ವೈದ್ಯಲೋಕಕ್ಕೂ ಅಚ್ಚರಿ

‘ಭೀಮಣ್ಣ ಖಂಡ್ರೆ ಅವರು ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಅವರ ಆರೋಗ್ಯ ಇನ್ನಷ್ಟು ಸುಧಾರಿಸಿದೆ. ಇದು ವೈದ್ಯಲೋಕಕ್ಕೂ ಅಚ್ಚರಿಯೇ ಸರಿ. ಭಾನುವಾರ ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಆರೋಗ್ಯ ಬಹಳ ಸುಧಾರಿಸಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬಹುಶಃ ಅವರ ಜೀವನ ಶೈಲಿಯೇ ಇದಕ್ಕೆ ಕಾರಣ ಇರಬಹುದು’ ಎಂದು ಅವರನ್ನು ಉಪಚರಿಸುತ್ತಿರುವ ವೈದ್ಯರ ತಂಡದಲ್ಲಿರುವವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.