ಬೀದರ್: ‘ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ₹25ಲಕ್ಷದ ವರೆಗೆ ಅನುದಾನ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ ವೈರಾಗೆ ಹೇಳಿದರು.
ನಗರದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಮಾತನಾಡಿ, ‘ಜನಪದ ಸಂಸ್ಕೃತಿ ಪರಿಶುದ್ಧವಾಗಿದೆ. ನುಡಿದಂತೆ ನಡೆಯುವ ಜನಪದ ಸಂಸ್ಕೃತಿಯಾಗಿದೆ. ಅಕ್ಷರ ಕಲಿತವ ಭ್ರಷ್ಟನಾಗಬಹುದು, ಸಂಸ್ಕೃತಿ ಕಲಿತವ ಎಂದು ಭ್ರಷ್ಟನಾಗಲ್ಲ’ ಎಂದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ದೆಹಲಿಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, ‘ಪ್ರತಿ ವರ್ಷ ಆ.22 ರಂದು ವಿಶ್ವ ಜಾನಪದ ದಿನಾಚರಣೆ ಆಚರಿಸಲಾಗುತ್ತಿದೆ. ಭವ್ಯ ಭಾರತದ ಸಂಸ್ಕೃತಿ ಉಳಿಸಿ ಯುವ ಪೀಳಿಗೆಗೆ ಪರಿಚಯ ಮಾಡುವ ಉದ್ದೇಶದಿಂದ ನಾವೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮ ಆಯೇಜಿಸಿದ್ದೇವೆ’ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ‘ಮೂರು ದಿನಗಳ ವರೆಗೆ ದೇಶದ ಪ್ರತಿ ರಾಜ್ಯದಿಂದ ವಿವಿಧ ಕಲಾ ತಂಡಗಳನ್ನು ಕರೆತರುವ ಮೂಲಕ ಜನಪದ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸುವುದಲ್ಲದೇ ಕಾರ್ಯಕ್ರಮದ ಸ್ಮರಣ ಸಂಚಿಕೆ ಕೂಡ ಹೊರತರಲಾಗುವುದು ಇದಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದು ಹೇಳಿದರು.
ಓಂ ಸಿದ್ದಿ ವಿನಾಯಕ ಕಾಲೇಜಿನ ಪ್ರಾಚಾರ್ಯ ಸಿದ್ರಾಮ ಬಿಚಕುಂದೆ, ಜಾನಪದ ಪರಿಷತ್ತಿನ ಕಾರ್ಯದರ್ಶಿ ಸುನೀತಾ ಕೂಡ್ಲಿಕರ್, ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರ, ಪ್ರೊ. ಸಂಜುಕುಮಾರ ತಾಂದಳೆ, ಎಸ್ ಬಿ ಕುಚಬಾಳ, ಮಲ್ಲಮ್ಮ ಸಂತಾಜಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.