ADVERTISEMENT

ಸೇವೆ ಬದಲು ತೊಂದರೆ ನೀಡುತ್ತಿದ್ದೀರಿ

ತಹಶೀಲ್ ಕಚೇರಿ ಅವ್ಯವಸ್ಥೆ: ಶಾಸಕರ ಆಕ್ರೋಶ ನುಡಿಗಳು

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 15:33 IST
Last Updated 8 ಜೂನ್ 2019, 15:33 IST
ಔರಾದ್ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತ ಸಂಜುಕುಮಾರ ಪಹಣಿ ತಿದ್ದುಪಡಿ ವಿಳಂಬದ ಕುರಿತು ಶಾಸಕ ಪ್ರಭು ಚವಾಣ್ ಎದುರು ಗೋಳು ತೋಡಿಕೊಂಡರು ----
ಔರಾದ್ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತ ಸಂಜುಕುಮಾರ ಪಹಣಿ ತಿದ್ದುಪಡಿ ವಿಳಂಬದ ಕುರಿತು ಶಾಸಕ ಪ್ರಭು ಚವಾಣ್ ಎದುರು ಗೋಳು ತೋಡಿಕೊಂಡರು ----   

ಔರಾದ್:'ಇಲ್ಲಿಯ ತಹಶೀಲ್ದಾರ್ ಕಚೇರಿ ಜನರಿಗೆ ಉತ್ತಮ ಸೇವೆ ಒದಗಿಸುವ ಬದಲು ತೊಂದರೆ ಕೊಡುವ ಕೆಲಸ ಮಾಡುತ್ತಿದೆ' ಎಂದು ಶಾಸಕ ಪ್ರಭು ಚವಾಣ್ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿ ನಡೆದ ಕಂದಾಯ ಇಲಾಖೆ ವಿವಿಧ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.

'ಜನ ಸ್ನೇಹಿಯಾಗಬೇಕಾದ ಕಂದಾಯ ಇಲಾಖೆ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಹಣ ಕೊಡದೆ ಒಂದೂ ಕೆಲಸ ಆಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ನಿಮಗೆ ಸರ್ಕಾರ ಕೊಡುವ ಸಂಬಳ ಸಾಕಾಗದೆ ಇದ್ದರೆ ನನ್ನ ಬಳಿ ಬನ್ನಿ. ಆದರೆ ದಯವಿಟ್ಟು ಜನರ ಬಳಿ ಹಣ ಕೇಳಬೇಡಿ. ನೀವು ಜನರಿಗೆ ತೊಂದರೆ ಮಾಡಿದರೆ ಖಂಡಿತ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ' ಎಂದು ನೋವಿನಿಂದ ನುಡಿದರು.

ADVERTISEMENT

'ಸರ್ವೇ ಸೇರಿದಂತೆ ಕೆಲ ವಿಭಾಗದಲ್ಲಿ ಕೆಲವರು 10-15 ವರ್ಷಗಳ ದೀಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಅಂತಹ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ಕೆಲಸಗಳು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಜನ ನಿತ್ಯ ಕಚೇರಿಗೆ ಅಲೆದು ಸುಸ್ತಾಗಿ ಹೋಗಿದ್ದಾರೆ. ಈ ರೀತಿಯಾದರೆ ಜನ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ' ಎಂದರು.

'ಕಚೇರಿ ಸಿಬ್ಬಂದಿಗಳ ಮೇಲೆ ಹಿಡಿತ ಇಲ್ಲವಾಗಿದೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಬಂದರೂ ಕೆಲಸ ಬಿಟ್ಟು ಬೇರೆ ಬೇರೆ ಕಡೆ ಇರುತ್ತಾರೆ. ಇದರಿಂದ ಜನರ ಕಲಸ ಆಗುತ್ತಿಲ್ಲ. ಈ ಕುರಿತು ತಹಶೀಲ್ದಾರ್ ಅವರಿಗೆ ಸಾಕಷ್ಟು ಸಲ ಹೇಳಿದರೂ ಸುಧಾರಣೆಯಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಆದರೆ ಇಡೀ ತಾಲ್ಲೂಕಿನ ಜನರನ್ನು ಕಚೇರಿ ಎದರು ತಂದು ನಿಲ್ಲಿಸುತ್ತೇನೆ' ಎಂದು ಎಚ್ಚರಿಸಿದರು.

ತಹಶೀಲ್ದಾರ್ ಎಂ. ಚಂದ್ರಶೇಖರ ಮಾತನಾಡಿ, 'ಜನರ ಕೆಲಸ ನಿಗದಿತ ಸಮಯದಲ್ಲಿ ಮಾಡಿಕೊಡುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಜನರಿಂದ ಹಣ ಪಡೆದ ಬಗ್ಗೆ ನಿಖರ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಶಿಪಾರಸ್ಸು ಮಾಡಲಾಗುವುದು' ಎಂದು ಹೇಳಿದರು.

ಉಪ ತಹಶೀಲ್ದಾರ್ ಮಂಜುನಾಥ, ಅಶೋಕ ರಾಜಗೀರೆ, ಉಪ ಖಜಾನೆ ಅಧಿಕಾರಿ ಮಾಣಿಕ ನೇಳಗೆ ವಿವಿಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಕೆಲಸ ಮಾಡಿ ಇಲ್ಲವೆ ವಿಷ ನೀಡಿ
ಔರಾದ್:
'ನನ್ನ ಕೆಲಸ ಮಾಡಿಕೊಡಿ ಇಲ್ಲವೆ ವಿಷ ಕೊಟ್ಟು ಸಾಯಿಸಿ ಎಂದು ಹಕ್ಯಾಳ ಗ್ರಾಮದ ವ್ಯಕ್ತಿಯೊಬ್ಬರು ಶಾಸಕರ ಎದರು ಅಸಹಾಯಕತೆ ವ್ಯಕ್ತಪಡಿಸಿದರು.

ಸಂಜುಕುಮಾರ ಚನ್ನಮಲ್ಲಪ್ಪ ಎಂಬುವರು ನೇರವಾಗಿ ಸಭೆಗೆ ಬಂದು ಮೊದಲು ನನ್ನ ಸಮಸ್ಯೆ ಪರಿಹರಿಸಿ ಇಲ್ಲವೇ ನಾನು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರು. ಇದರಿಂದ ಸಭೆಯಲ್ಲಿ ಕೆಲ ಕಾಲ ಗದ್ದಲ ಆತಂಕ ಆವರಿಸಿತ್ತು.

'ಪಹಣಿ ತಿದ್ದುಪಡಿಗಾಗಿ ಎರಡು ದಶಕದಿಂದ ಓಡಾಡುತ್ತಿದ್ದೇನೆ. ನನ್ನ ಕೆಲಸ ಮಾಡಿಕೊಡುವಂತೆ ಕೋರ್ಟ್‌ ಆದೇಶ ನೀಡಿದರೂ ಸ್ಪಂದಿಸುತ್ತಿಲ್ಲ. ಒಂದು ವಾರದಲ್ಲಿ ನನ್ನ ಕೆಲಸ ಆಗದೆ ಇದ್ದರೆ ತಹಶೀಲ್ದಾರ್ ಕಚೇರಿ ಎದುರಲ್ಲೇ ನೇಣು ಹಾಕಿಕೊಳ್ಳುತ್ತೇನೆ' ಎಂದು ಸಂಜುಕುಮಾರ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಜನ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿರುವುದು ನೋವಿನ ಸಂಗತಿಯಾಗಿದೆ. ದಯವಿಟ್ಟು ಕೆಲಸ ಮಾಡಲು ಆಗದವರು ನಮ್ಮ ತಾಲ್ಲೂಕು ಬಿಟ್ಟು ಹೋಗುವಂತೆ ಸೂಚಿಸಿದರು.

*
ತಹಶೀಲ್ದಾರ್ ಕಚೇರಿ ಸಿಬ್ಬಂದಿ ಕಾರ್ಯವೈಖರಿಯಿಂದ ತಾಲ್ಲೂಕಿನ ಮಾನ ಹೋಗುತ್ತಿದೆ. ಸರಿಯಾಗಿ ಕೆಲಸ ಮಾಡಿ ಇಲ್ಲವೇ ವರ್ಗಾವಣೆ ಮಾಡಿಕೊಂಡು ಹೋಗಿ.
-ಪ್ರಭು ಚವಾಣ್, ಶಾಸಕರು ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.