
ಬೀದರ್: ಬೀದರ್‌ನಿಂದ ಔರಾದ್‌ಗೆ ಹೋಗುವ ಮುಖ್ಯರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲೊಂದು ಮನೆಯಿದೆ. ಆ ಮನೆಯ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವಾಗ ಬಗೆಬಗೆಯ ಹೂವಿನ ಗಿಡ ಮತ್ತು ಅಲಂಕಾರಿಕ ಸಸ್ಯಗಳು ಕಣ್ಮನ ಸೆಳೆಯುತ್ತವೆ. ತಾರಸಿಯಂತೂ ಹೇಳತೀರದಷ್ಟು ಸುಂದರವಾಗಿದೆ.
ಸುಮಾರು 30ಕ್ಕೂ ಹೆಚ್ಚು ಬಗೆಯ ಅಲಂಕಾರಿಕ ಹಾಗೂ ಔಷಧಿ ಗುಣ ಹೊಂದಿರುವ ಸಸ್ಯಗಳಿವೆ. ಹತ್ತು ಬಗೆಯ ಸೇವಂತಿ ಹೂವಿನ ಗಿಡಗಳಿರುವುದು ವಿಶೇಷ. ವಿನೂತನ ವಿನ್ಯಾಸದ ಲೋಹದ ಸ್ಟ್ಯಾಂಡ್ ಮಾಡಿ ಪಾಟ್‌ಗಳಲ್ಲಿ ಸಾಲಾಗಿ ಜೋಡಿಸಿ ಇಡಲಾಗಿದೆ. ಗೋಡೆಯ ಮೇಲೆ ಬಿಡಿಸಿರುವ ವರ್ಲಿ ಚಿತ್ರಕಲೆ ಗಮನ ಸೆಳೆಯುತ್ತದೆ. ಯಾರೇ ಅಲ್ಲಿಗೆ ಹೋದರೂ ಎಲ್ಲಾ ಚಿಂತೆಗಳು ದೂರವಾಗಿ ಬೇರೊಂದು ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿಗೆ ಮುದ ನೀಡುತ್ತದೆ.
ಇಂತಹದ್ದೊಂದು ಸುಂದರವಾದ ಹೂದೋಟ ನಿರ್ಮಿಸಿದವರು ನಗರದ ಕರ್ನಾಟಕ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ರೋಹಿತ್ ಜಿರೋಬೆ. ಟೆರೆಸ್ ಗಾರ್ಡನ್ ನಿರ್ಮಾಣಕ್ಕೆ ಇವರ ತಾಯಿಯೇ ಇವರಿಗೆ ಪ್ರೇರಣೆಯಂತೆ. ಇವರ ತಾಯಿ ಕೆಲವು ಕುಂಡಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದರು. ಬಾಲ್ಯದಿಂದಲೂ ಅದನ್ನು ನೋಡಿ ಬೆಳೆದ ರೋಹಿತ್ ಅದರಿಂದ ಪ್ರಭಾವಿತರಾಗಿ ಮನೆಯ ಮೆಟ್ಟಿಲು, ಮಹಡಿ ಮೇಲೆಲ್ಲಾ ಹೂದೋಟ ನಿರ್ಮಿಸಿದ್ದಾರೆ.
ಸ್ಥಳೀಯ ಹೂಗಳಲ್ಲದೇ ಗುಜರಾತ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಿಂದಲೂ ಹಲವು ಸಸಿಗಳನ್ನು ತರಿಸಿದ್ದಾರೆ. ಹೈಬ್ರಿಡ್ ಮತ್ತು ಇಂಡಿಯನ್ ಸೇವಂತಿ ಹೂವಿನ ಹತ್ತು ಬಗೆಯ ಗಿಡಗಳಿವೆ. ರುದ್ರಾಕ್ಷಿ, ಜೇಡ್, ಸುಗಂದರಾಜ, ಸ್ನೇಕ್ ಪ್ಲಾಂಟ್, ಸ್ಪೈಡರ್ ಪ್ಲಾಂಟ್, ಜಿನಿಯಾ ಪ್ಲಾಂಟ್ಸ್, ಜರ್ಬೆರಾ, ಬೊನ್ಸಾಯ್, ರೇನ್ ಲಿಲ್ಲಿ, ಕಂಗಿಲ್, ಸಿಂಗೋನಿಯಂ, ಡಹ್ಲಿಯಾ, ರಂಗೂನ್ ಕ್ರೀಪರ್, ಮನಿ ಪ್ಲಾಂಟ್, ಸೇರಿದಂತೆ ಅನೇಕ ಬಗೆಯ ಸಸಿಗಳು, ಹೂಗಳು ಆಕರ್ಷಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.