ನೆಲವಾಡ(ಜನವಾಡ): ಬೀದರ್ ತಾಲ್ಲೂಕಿನ ನೆಲವಾಡ ಗ್ರಾಮದ ರೈತ ಸಂತೋಷ ದೇಗಲಮಡಿ ಬೇಸಿಗೆಯಲ್ಲಿ ಚಿಯಾ ಬೆಳೆ ಸಮೃದ್ಧವಾಗಿ ಬೆಳೆದು ಗಮನ ಸೆಳೆದಿದ್ದಾರೆ.
ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ಮೆಕ್ಸಿಕೋದ ಅಲ್ಪಾವಧಿ ಸಿರಿಧಾನ್ಯ ಬೆಳೆ ಚಿಯಾ ಬೆಳೆದಿದ್ದಾರೆ. ಒಂದು ವಾರದಲ್ಲಿ ಬೆಳೆ ಕಟಾವಿಗೆ ಬರಲಿದೆ. ರೈತ ₹1.40 ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.
‘ನನಗೆ ಆರೂವರೆ ಎಕರೆ ಜಮೀನಿದೆ. ಈ ಪೈಕಿ ಒಂದೂವರೆ ಎಕರೆಯಲ್ಲಿ ಜನವರಿ 15ಕ್ಕೆ ಚಿಯಾ ಬಿತ್ತನೆ ಮಾಡಿದ್ದೇನೆ. ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗೆ ನೀರುಣಿಸಿದ್ದೇನೆ. ಬಂಪರ್ ಬೆಳೆ ಬಂದಿದೆ’ ಎಂದು ತಿಳಿಸುತ್ತಾರೆ ಸಂತೋಷ ದೇಗಲಮಡಿ.
ಬಿತ್ತನೆ ಬೀಜ, ಗೊಬ್ಬರ ಹಾಗೂ ಇತರ ಖರ್ಚು ಸೇರಿ ಬೆಳೆಗೆ ₹20 ಸಾವಿರ ಖರ್ಚಾಗಿದೆ. ಎಂಟು ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಚಿಯಾ ಬೆಲೆ ಪ್ರತಿ ಕ್ವಿಂಟಲ್‍ಗೆ ₹20 ಸಾವಿರ ಇದೆ. ಎಲ್ಲ ಖರ್ಚು ಹೊರತುಪಡಿಸಿ ₹1.40 ಲಕ್ಷ ಗಳಿಕೆ ಆಗಲಿದೆ ಎಂದು ಅವರು ಹೇಳಿದರು.
ಚಿಯಾ 90 ರಿಂದ 100 ದಿನಗಳ ಬೆಳೆಯಾಗಿದ್ದು ಹೆಚ್ಚು ನಿರ್ವಹಣೆ ಬೇಕಿಲ್ಲ. ಯಂತ್ರದಿಂದ ಕಟಾವು ಮಾಡಬಹುದಾಗಿದೆ. ಹೀಗಾಗಿ ಕೂಲಿ ಕಾರ್ಮಿಕರ ಸಮಸ್ಯೆಯೂ ಇರುವುದಿಲ್ಲ.
ಯಥೇಚ್ಛ ಪೋಷಕಾಂಶಗಳನ್ನು ಹೊಂದಿದ್ದರಿಂದ ಚಿಯಾ ಬೆಳೆಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ ಎಂದು ಬಿ.ಎ. ಪದವೀಧರರಾಗಿರುವ 40 ವರ್ಷದ ಅವರು ಹೇಳುತ್ತಾರೆ.
ಚಿಯಾ ಬೆಳೆಗೆ ಔಷಧೀಯ ಗುಣ: ಚಿಯಾ ಬೆಳೆಗೆ ಔಷಧೀಯ ಗುಣ ಇದೆ. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ ನಿಯಂತ್ರಣ ಹಾಗೂ ತೂಕ ಕಡಿಮೆ ಮಾಡಲು ಸಹಕಾರಿ ಆಗಿದೆ. ದೇಹವನ್ನು ತಂಪಾಗಿ ಇರಿಸುತ್ತದೆ.
ದೇಶದಲ್ಲಿ ಮೇಘಾಲಯದಲ್ಲಿ ಹೆಚ್ಚಾಗಿ ಬೆಳೆಯುವ ಚಿಯಾದಲ್ಲಿ ಒಮೆಗಾ 3, ಮೆಗ್ನೀಷಿಯಂ, ಪೊಟ್ಯಾಷಿಯಂ ಪ್ರಮಾಣ ಅಧಿಕವಾಗಿದೆ.
ಬೇಸಿಗೆಯಲ್ಲಿ ಚಿಯಾ ಬೆಳೆ ಉತ್ತಮವಾಗಿ ಬಂದಿದ್ದರಿಂದ ಸುತ್ತಮುತ್ತಲಿನ ರೈತರು ಹೊಲಕ್ಕೆ ಭೇಟಿ ನೀಡುತ್ತಿದ್ದಾರೆ. ಚಿಯಾ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆಸಂತೋಷ ದೇಗಲಮಡಿ ರೈತ
ಚಿಯಾ ಕಡಿಮೆ ಖರ್ಚಿನ ಲಾಭದಾಯಕ ಬೆಳೆಯಾಗಿದೆ. ಬೀದರ್ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 10 ಹೆಕ್ಟೇರ್‌ನಲ್ಲಿ ಚಿಯಾ ಬೆಳೆಯಲಾಗಿದೆಸಚಿನ್ ಕೌಠಾ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.