
ಬೀದರ್: ದೆಹಲಿಯ ಅಬಕಾರಿ ನೀತಿ ಪ್ರಕರಣ ಸಂಬಂಧ ನ್ಯಾಯಾಲಯ ನೀಡಿದ ತೀರ್ಪು ಸ್ವಾಗತಿಸಿ ‘ಆಮ್ ಆದ್ಮಿ ಪಕ್ಷ’ದ (ಎಎಪಿ) ಕಾರ್ಯಕರ್ತರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ದೆಹಲಿಯಲ್ಲಿ ಎಎಪಿ ಸರ್ಕಾರವಿದ್ದಾಗ ಯಾವುದೇ ಅಬಕಾರಿ ಹಗರಣ ನಡೆದಿಲ್ಲವೆಂದು ನ್ಯಾಯಾಲಯದ ತೀರ್ಪಿನಿಂದ ಸ್ಪಷ್ಟವಾಗಿದೆ. ಸಿಬಿಐ ಸಂಸ್ಥೆಯ ವಿರುದ್ಧವೇ ತನಿಖೆ ಕೈಗೊಳ್ಳುವಂತೆಯೂ ತಿಳಿಸಿದೆ. ಎಎಪಿ ವಿರುದ್ಧ ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಿದ್ದು ಫುಲಾರಿ ತಿಳಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಎಎಪಿಯನ್ನು ಭ್ರಷ್ಟಾಚಾರಿಗಳೆಂದು ಬಿಂಬಿಸಲು ಪ್ರಯತ್ನಿಸಿದ್ದವು. ಆದರೆ, ನ್ಯಾಯಾಲಯದ ತೀರ್ಪಿನಿಂದ ಆ ಆರೋಪಗಳಿಗೆ ಅಂತಿಮ ತೆರೆ ಬಿದ್ದಿದೆ ಎಂದರು.
2022ರಲ್ಲಿ ಪಂಜಾಬ್‌ನಲ್ಲಿ ಎಎಪಿ ಸಾಧಿಸಿದ ವಿಜಯದ ಬಳಿಕ ವಿವಿಧ ರಾಜ್ಯಗಳಲ್ಲಿ ಪಕ್ಷದ ವಿಸ್ತರಣೆ ಭೀತಿಯಿಂದ ರಾಜಕೀಯ ಷಡ್ಯಂತ್ರ ರೂಪಿಸಲಾಗಿತ್ತು. ಅದು ಈಗ ಸುಳ್ಳಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜ್‌ಕುಮಾರ್ ಎನ್. ಪಾಟೀಲ್, ಬೀದರ್ ತಾಲ್ಲೂಕು ಅಧ್ಯಕ್ಷ ಪುಂಡಲೀಕ್ ಲಿಂಗದಳ್ಳಿಕರ್, ಉಪಾಧ್ಯಕ್ಷ ಕಂಟೆಪ್ಪ ಗುಪ್ತ, ತಾಲ್ಲೂಕು ಯುವ ಅಧ್ಯಕ್ಷ ಸುರೇಶ್ ಸಿಂಗ್ ಠಾಕೂರ್, ನಗರ ಅಧ್ಯಕ್ಷ ಮುಜಮಿಲ್, ಆಟೋ ವಿಂಗ್ ಅಧ್ಯಕ್ಷ ರೋಹನ್ ರಾಯ್, ಔರಾದ್ ಅಧ್ಯಕ್ಷ ಶಾಂತಕುಮಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.