
ಬೀದರ್: ತ್ರಿವರ್ಣ ಧ್ವಜದಲ್ಲಿರುವ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಹೊಗೆಯುಗುಳುತ್ತ ಲೋಹದ ಹಕ್ಕಿಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದಾಗ ಅಲ್ಲಿದ್ದವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನೀಲಿ ಆಗಸದಲ್ಲಿ ಹೃದಯ ಚಿಹ್ನೆ ಮೂಡಿದಾಗಲಂತೂ ಅಲ್ಲಿದ್ದವರ ‘ದಿಲ್’ ಖುಷ್ ಆಗಿತ್ತು.
ಇಂತಹದ್ದೊಂದು ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ನಗರದ ಬೀದರ್ ಕೋಟೆ. ಭಾರತೀಯ ವಾಯುಪಡೆ ಬೀದರ್ ಘಟಕದಿಂದ ನಗರದ ಕೋಟೆ ಆವರಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ವೈಮಾನಿಕ ಪ್ರದರ್ಶನವು ಎಲ್ಲರ ಮನಸೂರೆಗೊಳಿಸಿತು.
ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡವು ಒಂಬತ್ತು ವಿಮಾನಗಳ ಮೂಲಕ ಆಕಾಶದಲ್ಲಿ ವಿವಿಧ ಕಸರತ್ತುಗಳ ಮೂಲಕ ಜನರ ಮನಗೆದ್ದಿತು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಕೋಟೆಯ ಆವರಣದಲ್ಲಿ ಸೇರಿದ್ದರು. ವಿಮಾನಗ
ಕ್ರಾಸಿಂಗ್, ಬ್ಯಾರಲ್ ರೋಲ್, ಪರಸ್ಪರ ಎದುರು ಬದುರಾಗಿ ಇನ್ನೇನು ಡಿಕ್ಕಿ ಹೊಡೆದುಕೊಳ್ಳುತ್ತವೆ ಎಂಬಂತೆ ತಮ್ಮ ಅದ್ಭುತ ಕೌಶಲವನ್ನು ಪ್ರದರ್ಶಿಸಿ ಭಾರತೀಯ ವಾಯುಪಡೆಯ ಕ್ಷಮತೆ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಏರ್ ಶೋ ಆರಂಭಗೊಳ್ಳುವುದಕ್ಕೂ ಮುನ್ನವೇ ಅಪಾರ ಸಂಖ್ಯೆಯ ಜನ ಕೋಟೆಯ ಆವರಣದಲ್ಲಿ ನೆರೆದಿದ್ದರು. ಗಣ್ಯರಿಗಾಗಿ ಕೋಟೆಯ ಎತ್ತರದ ಪ್ರದೇಶದಲ್ಲಿ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಗೀತದ ಮೆರುಗು
ಕೋಟೆಯ ಪ್ರಮುಖ ಭಾಗಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿತ್ತು. ನೀಲಿ ಆಕಾಶದಲ್ಲಿ ಸೂರ್ಯಕಿರಣ ವಿಮಾನಗಳು ತಮ್ಮ ಕಸರತ್ತು ಪ್ರದರ್ಶಿಸುತ್ತಿದ್ದರೆ ಇತ್ತ ದೇಶಭಕ್ತಿ ಗೀತೆಗಳು ಮೊಳಗಿದವು. ಇದು ಅಲ್ಲಿ ನೆರೆದಿದ್ದವರ ಹುಮ್ಮಸ್ಸು ಹೆಚ್ಚಿಸಿತು. ಸಾರ್ವಜನಿಕರು ಸೇರಿದಂತೆ ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಶಿಳ್ಳೆ ಹೊಡೆದು ಸಂಭ್ರಮಿಸಿದರು. ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.
ಮಳಿಗೆಯಲ್ಲಿ ಖರೀದಿ
ವಾಯುಪಡೆ ಚಿಹ್ನೆ ವಿಮಾನಗಳ ಚಿಹ್ನೆ ಇರುವ ಟೀ ಶರ್ಟ್ ಕೀಚೈನ್ ಜಾಕೆಟ್ ಕ್ಯಾಪ್ ಸೇರಿದಂತೆ ಇತರೆ ವಸ್ತುಗಳ ಮಾರಾಟ ಮಳಿಗೆಯನ್ನು ಭಾರತೀಯ ವಾಯುಪಡೆ ಬೀದರ್ ಘಟಕದಿಂದ ತೆರೆಯಲಾಗಿತ್ತು. ಜನ ವಸ್ತುಗಳನ್ನು ವೀಕ್ಷಿಸಿ ಖರೀದಿಸಿ ಕೊಂಡೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.