
ಬೀದರ್: ಬಜೆಟ್‍ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ ₹500 ಕೋಟಿ ಹಣ ಮೀಸಲಿಡುವಂತೆ ಆಗ್ರಹಿಸಿ ಅಂಬಿಗರ ಚೌಡಯ್ಯ ಯುವಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ನೇತೃತ್ವದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅವರಿಗೆ ಸಲ್ಲಿಸಿದರು.
‘ರಾಜ್ಯದಲ್ಲಿ 50ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕೋಳಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸೇರಿದಂತೆ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಸಮುದಾಯದ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮಕ್ಕೆ ₹500 ಕೋಟಿ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.
ನಮ್ಮ ಸಮುದಾಯ ಅತಿ ಹಿಂದುಳಿದಿದ್ದು, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ವಂಚಿತವಾಗಿದೆ. ಅನೇಕ ವರ್ಷಗಳಿಂದ ನಮ್ಮ ಸಮುದಾಯವನ್ನು ಸರ್ಕಾರಗಳು ಕಡೆಗಣಿಸುತ್ತ ಬಂದಿದೆ. ಈಗಾದರೂ ನಮ್ಮ ನಿಗಮಕ್ಕೆ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸೇನೆ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಳ್ಳಿಖೇಡಕರ್, ಬಿ.ರಾಮಣ್ಣಾ, ಶರಣಪ್ಪಾ ಖಾಸೆಂಪೂರ್ ಸೇರಿದಂತೆ ಇತರರು ಇದ್ದರು.
ಬೇಡಿಕೆಗಳು: ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆನ 1 ಎಕರೆ ಭೂಮಿ ಹಾಗೂ ಕಟ್ಟಡಕ್ಕೆ ಹಣ ಘೋಷಿಸಬೇಕು.
ರಾಜ್ಯದ ಕೆರೆಗಳು ಮತ್ತು ಜಲಾಶಯಗಳಲ್ಲಿ ಮೀನುಗಾರಿಕೆ ನಡೆಸಲು ನಿಗಮಕ್ಕೆ ಅವಕಾಶ ಮತ್ತು ಅನುಮತಿ ನೀಡಬೇಕು.
ವಿಧಾನಸೌಧದ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪನೆ ಮಾಡಬೇಕು.
ಪ್ರತಿಯೊಂದು ಜಿಲ್ಲಾಕೇಂದ್ರದಲ್ಲಿ ಚೌಡಯ್ಯನವರ ಪ್ರತಿಮೆ ಸ್ಥಾಪಿಸಲು ಸ್ಥಳಾವಕಾಶ ಕೊಡಬೇಕು.
ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪಿಸಬೇಕು.
ಹಾವೇರಿ ಜಿಲ್ಲೆಯ ನರಸಿಪೂರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಸ್ಥಳವನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ₹50 ಕೋಟಿ ಘೋಷಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.