ಬೀದರ್: ‘ಕನ್ನಡ ಸಾಹಿತ್ಯ, ಕಾವ್ಯಲೋಕಕ್ಕೆ ಶೋಭೆ ತಂದುಕೊಟ್ಟ ಶಬ್ದ ಗಾರುಡಿಗ ದ.ರಾ.ಬೇಂದ್ರೆ’ ಎಂದು ಪ್ರಾಂಶುಪಾಲ ಪಿ. ವಿಠ್ಠಲ ರಡ್ಡಿ ತಿಳಿಸಿದರು.
ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಕನ್ನಡ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ.ಬೇಂದ್ರೇಯವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅನೇಕ ಕಾವ್ಯಗಳನ್ನು ಸರಳ ಭಾಷೆಯಲ್ಲಿ ರಚಿಸಿ, ಎಲ್ಲರ ಮನೆ ಮಾತಾದವರು ಬೇಂದ್ರೆಯವರು. ನಾಡು ಕಂಡ ಶ್ರೇಷ್ಠ ಕವಿ ಎಂದರು.
ಉಪ ಪ್ರಾಂಶುಪಾಲ ಅನೀಲಕುಮಾರ ಅಣದೂರೆ ಮಾತನಾಡಿ, ಅಂಬಿಕಾತನಯದತ್ತ ಕಾವ್ಯನಾಮದಿಂದ ಪ್ರಖ್ಯಾತರಾದ ಬೇಂದ್ರೇಯವರು ಕಾಲೇಜು ಹಂತದಲ್ಲಿಯೇ ಕವಿತೆಗಳನ್ನು ಬರೆಯುತ್ತಿದ್ದರು. ಅವರ ಸಾಹಿತ್ಯದಲ್ಲಿ ಉತ್ಸಾಹದ ಚಿಲುಮೆಯನುಕ್ಕಿಸಬಲ್ಲ, ನೊಂದಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರಣಯದ ಕವಿತೆಗಳು ಸೇರಿವೆ ಎಂದು ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾದೇವಿ ಮಳ್ಳಿಸ್ವಾಮಿ ಮಾತನಾಡಿ, ಸಾಹಿತ್ಯ ನಮಗೆ ಪ್ರತಿ ಹೆಜ್ಜೆಗೂ ಮಾದರಿ. ರಸಋಷಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬೇಂದ್ರೆ ಅಜ್ಜನವರು ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನವೆಂದು ಜೀವನವನ್ನು ಪ್ರತಿಕ್ಷಣವೂ ಖುಷಿಯಿಂದ ಆಸ್ವಾದಿಸಿದವರು ಎಂದರು.
ಪ್ರಾಧ್ಯಾಪಕಿಯರಾದ ರತಿದೇವಿ ಪ್ರಾರ್ಥನಾ ಗೀತೆ ಹಾಡಿದರೆ, ಮಲ್ಲಿಕಾರ್ಜುನ ಕೋಟೆ ಸ್ವಾಗತಿಸಿದರು. ಕಾವೇರಿ ಖಂಡ್ರೆ ವಂದಿಸಿದರು. ಕಚೇರಿಯ ಅಧೀಕ್ಷಕ ಸುಜೀತಕುಮಾರ ಬಿ. ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.