
ಬೀದರ್: ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆ ಮೈದಾನದಲ್ಲಿ ಪುಸ್ತಕ ಸಂತೆಗೆ ವೇದಿಕೆ ಸಿದ್ಧಗೊಂಡಿದ್ದು, ಸಾಹಿತಿಗಳು ಹಾಗೂ ಓದುಗರ ಸಮಾಗಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಜ. 24ರಿಂದ 26ರ ವರೆಗೆ ಪುಸ್ತಕ ಸಂತೆ ನಡೆಯಲಿದೆ. ಸಾಹಿತಿಗಳ ವಿಚಾರ ಮಂಡನೆ, ಪುಸ್ತಕಗಳ ಬಿಡುಗಡೆ, ಚರ್ಚಾಗೋಷ್ಠಿ ಹಾಗೂ ಸಂವಾದಕ್ಕೆ ವೇದಿಕೆ ನಿರ್ಮಿಸಲಾಗಿದ್ದು, ಐನೂರಕ್ಕೂ ಹೆಚ್ಚು ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ವೇದಿಕೆಗೆ ಹೊಂದಿಕೊಂಡಂತೆ ಪುಸ್ತಕ ಮಳಿಗೆಗಳನ್ನು ನಿರ್ಮಿಸಲಾಗಿದೆ. 50 ಪುಸ್ತಕ ಮಳಿಗೆಗಳು ತಲೆ ಎತ್ತಲಿವೆ. ವೀರಲೋಕ ಬುಕ್ಸ್, ಸಪ್ನಾ, ಅಂಕಿತ, ನವ ಕರ್ನಾಟಕ, ಋಷಿಸ್ವರ ಪಬ್ಲಿಕೇಶನ್, ಪ್ರಿಸಂ, ತೇಜಸ್, ಶ್ರೀನಿಧಿ, ಶ್ರೀಮಯ, ಪುಸ್ತಕಮಯ, ಅವ್ವ ಪುಸ್ತಕಾಲಯ ಸೇರಿದಂತೆ ಇತರೆ ಪ್ರಕಾಶನ ಸಂಸ್ಥೆಗಳು ಸೇರಿವೆ.
ವೇದಿಕೆಯ ಮಗ್ಗುಲಲ್ಲೇ ‘ರೌಂಡ್ ಟೇಬಲ್’ ನಿರ್ಮಿಸಲಾಗಿದ್ದು, ಆಯ್ದ ಸಾಹಿತಿಗಳೊಂದಿಗೆ ಓಲೆ ಬರೆದು, ಅವರೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಪುಸ್ತಕ ಮಳಿಗೆಗಳ ಮುಂಭಾಗದಲ್ಲಿ ’ಐ ಲವ್ ಬೀದರ್’ ಎಂಬ ದೊಡ್ಡಕ್ಷರಗಳ ಎದುರು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಲಾಗಿದೆ.
‘ಬೆಂಗಳೂರಿನ ವೀರಲೋಕ ಬುಕ್ಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಭಾಲ್ಕಿ ಹಿರೇಮಠ ಸಂಸ್ಥಾನದ ಸಹಯೋಗದಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ದಿನವಿಡೀ ವಿವಿಧ ವಿಷಯಗಳ ಮೇಲೆ ಚರ್ಚಾಗೋಷ್ಠಿಗಳು, ಸಂವಾದ ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಪುಸ್ತಕ ಸಂತೆಯ ಆಯೋಜಕ ಗುರುನಾಥ ರಾಜಗೀರಾ ಮನವಿ ಮಾಡಿದ್ದಾರೆ.
- ಪುಸ್ತಕ ಸಂತೆಯಲ್ಲಿ ಇಂದೇನು...?
ಶನಿವಾರ (ಜ.24). ಸ್ಥಳ: ಸಾಯಿ ಶಾಲೆ ಮೈದಾನ ನೆಹರೂ ಕ್ರೀಡಾಂಗಣದ ಸಮೀಪ. ಬೆಳಿಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ. ಉದ್ಘಾಟನೆ–ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ. ಪುಸ್ತಕ ಮಳಿಗೆ ಉದ್ಘಾಟನೆ–ಪೌರಾಡಳಿತ ಸಚಿವ ರಹೀಂ ಖಾನ್. ವಾಣಿಜ್ಯ ಮಳಿಗೆ ಉದ್ಘಾಟನೆ–ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ. ಸಾನ್ನಿಧ್ಯ–ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು. ಸಮ್ಮುಖ–ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ. ಅಧ್ಯಕ್ಷತೆ–ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ. ವಿಶೇಷ ಆಹ್ವಾನಿತರು–ಲೇಖಕ ಜೋಗಿ ನಟ ಪ್ರೇಮ್. ಮಧ್ಯಾಹ್ನ
12ಕ್ಕೆ ‘ಮಹಿಳಾ ಸಾಹಿತ್ಯದಲ್ಲಿ ಮೌಲ್ಯಗಳು’ ಗೋಷ್ಠಿ–1. ವಿಷಯ ಮಂಡನೆ–ವಿಜಯಪುರದ ಸಾಹಿತಿ ಉಷಾ ಹಿರೇಮಠ. ಸಂವಾದಕರು–ಮಲ್ಲಮ ಆರ್. ಪಾಟೀಲ್ ರಜಿಯಾ ಬಳಬಟ್ಟಿ ವಿದ್ಯಾವತಿ ಹಿರೇಮಠ ವಿಜಯಲಕ್ಷ್ಮೀ ಕೌಟಗೆ. ಮಧ್ಯಾಹ್ನ 12.50ಕ್ಕೆ ‘ಹೊಸ ತಲೆಮಾರಿನ ಬರಹಗಾರರು–ಬಿಕ್ಕಟ್ಟುಗಳು’ ಗೋಷ್ಠಿ–2. ವಿಷಯ ಮಂಡನೆ–ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು. ಸಂವಾದಕರು–ಶಶಿಕಾಂತ ಬಂಬುಳಗೆ ಈಶ್ವರಯ್ಯ ಕೊಡಂಬಲ ಶ್ರೇಯಾ ಮಹೀಂದ್ರಕರ್.
ಮಧ್ಯಾಹ್ನ 1.40ಕ್ಕೆ ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ’ ಗೋಷ್ಠಿ–3. ವಿಷಯ ಮಂಡನೆ–ಲೇಖಕ ಮುಹಮ್ಮದ್ ರಫಿ ಪಾಷಾ ಬೆಂಗಳೂರಿನ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಹುಮನಾಬಾದ್ ತಹಶೀಲ್ದಾರ್ ತಬಸ್ಸುಮ್ ಯಾದಗಿರಿ ಜಾರಿ ನಿರ್ದೇಶನಾಲಯದ ಆಯುಕ್ತ ಖಾಜಾ ಖಲಿಲುಲ್ಲಾ. ಮಧ್ಯಾಹ್ನ 2.30ಕ್ಕೆ ‘ವಿಶ್ವ ಪ್ರಸಿದ್ಧ ಬಿದ್ರಿ ಕಲೆ’ ಗೋಷ್ಠಿ–4. ವಿಷಯ ಮಂಡನೆ–ಹಿರಿಯ ಪತ್ರಕರ್ತ ಹೃಷಿಕೇಶ ಬಹಾದ್ದೂರ ದೇಸಾಯಿ. ಸಂವಾದಕರು–ವಿರುಪಾಕ್ಷ ಗಾದಗಿ ಮಹಾರುದ್ರ ಡಾಕುಳಗಿ ಮಹಮ್ಮದ್ ಸಲಿಮೊದ್ದೀನ್. ಮಧ್ಯಾಹ್ನ 3.20ಕ್ಕೆ ‘ಇತಿಹಾಸವೋ ಪೌರಾಣಿಕತೆಯೋ’ ಗೋಷ್ಠಿ–5. ಸಂವಾದಕರು–ಲೇಖಕ ನಾಗರಾಜ ವಸ್ತಾರೆ.
ಸಂಜೆ 4.10ಕ್ಕೆ ‘ವಿಜ್ಞಾನ–ತಂತ್ರಜ್ಞಾನ ಮತ್ತು ಸಾಹಿತ್ಯ’ ಗೋಷ್ಠಿ–6. ವಿಷಯ ಮಂಡನೆ– ಕಲ್ಲಚ್ಚು ಆರ್. ಮಹೇಶ್. ಸಂವಾದಕರು–ನೇಮಿಚಂದ್ರ ಮಧು ವೈಎನ್. ಪ್ರಜ್ಞಾ ಮತ್ತಿಹಳ್ಳಿ.
ಸಂಜೆ 5ಕ್ಕೆ ‘ವಿಶ್ವದ ಮೊದಲ ಸಂಸತ್ತು–ಅನುಭವ ಮಂಟಪ ಗೋಷ್ಠಿ–7. ವಿಷಯ ಮಂಡನೆ–ಚಿಂತಕ ಬಾಬಾ ಸಾಹೇಬ ಗಡ್ಡೆ. ಸಂವಾದಕರು–ಸಿದ್ದಪ್ಪ ಮೂಲಗೆ ರಘುಶಂಖ ಭಾತಂಬ್ರಾ ರಮೇಶ ಬಿರಾದಾರ. ಸಂಜೆ 6ಕ್ಕೆ ಸಾಂಸ್ಕೃತಿಕ ಸೌರಭ. ನೃತ್ಯ–ನೂಪುರ ನೃತ್ಯಾಲಯ ತಂಡ. ಗಾಯನ–ಶಿವಾನಿ ಸ್ವಾಮಿ ಮಲ್ಲಿಕಾರ್ಜುನ ಸ್ವಾಮಿ ಐನೊಳ್ಳಿ ಮಹೇಶ್ವರಿ ಪಾಂಚಾಳ ನಾಗರಾಜ ಬೇಗಿ ಮಹೇಶಕುಮಾರ ಕುಂಬಾರ ಅಶ್ವಿನಿ ರಾಜಕುಮಾರ ಬಂಪಳ್ಳಿ. ಭಜನೆ–ಬಸವಕಲ್ಯಾಣದ ಚಿತ್ತಕೋಟಾದ ಮಹದೇವಲಿಂಗ ಭಜನಾ ಮಂಡಳಿಯ ಗುರುಪ್ರಸಾದ ಚಂದ್ರಶೇಖರ ಹಾಗೂ ತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.