
ಬೀದರ್: ‘ಮನಸ್ಸು ಶಾಂತವಾದರೆ ನಿಜವಾದ ಸುಖ ಅನುಭವಿಸಲು ಸಾಧ್ಯ’ ಎಂದು ಪ್ರವಚನಕಾರ ರಾಜಯೋಗಿ ಭಾಯ್ ತಿಳಿಸಿದರು.
ನಗರದ ಜನವಾಡ ರಸ್ತೆಯ ಬ್ರಹ್ಮಕುಮಾರಿ ಪಾವನಧಾಮ ಕೇಂದ್ರದಲ್ಲಿ 90ನೇ ಮಹಾ ಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವ ಧ್ವಜಾರೋಹಣ ಮಾಡಿ ಮಾತನಾಡಿದರು.
ಹೊರಗಿನ ಪರಿಸ್ಥಿತಿಗಳಿಗಿಂತ ಒಳಗಿನ ಶಾಂತಿ ಮುಖ್ಯ. ‘ಶಿವರಾತ್ರಿ’ ಎಂಬ ಪದದಲ್ಲಿ ‘ರಾತ್ರಿ’ ಅಂದರೆ ಅಜ್ಞಾನ ಮತ್ತು ಅಂಧಕಾರ. ಇಂದಿನ ಸಮಾಜದಲ್ಲಿ ನೈತಿಕ, ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಕುಸಿತವೇ ಧರ್ಮಗ್ಲಾನಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ಹೇಳಿದರು.
ಉಪ ಎಂದರೆ ಹತ್ತಿರ, ವಾಸ ಎಂದರೆ ನೆಲೆಸು. ಮನಸ್ಸು ಮತ್ತು ಬುದ್ಧಿಯಿಂದ ಪರಮಾತ್ಮನ ಸಮೀಪದಲ್ಲಿರುವುದೇ ನಿಜವಾದ ಉಪವಾಸ ಎಂದರು.
ಪಾವನಧಾಮ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನ್‌ಜೀ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಮಹಾ ಶಿವರಾತ್ರಿ ಪವಿತ್ರ ಸಂದರ್ಭದಲ್ಲಿ ವ್ಯಸನಮುಕ್ತ ಜೀವನ ನಡೆಸುವ ಸಂಕಲ್ಪ ಮಾಡಬೇಕು. ನಮ್ಮ ಕುಟುಂಬ, ಸಮಾಜ ಹಾಗೂ ದೇಶವನ್ನು ನಶೆಮುಕ್ತಗೊಳಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ತಿಳಿಸಿದರು.
ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ, ಬಿ.ಕೆ. ವಿಜಯಲಕ್ಷ್ಮೀ, ಬಿ.ಕೆ. ಜ್ಯೋತಿ, ಬಿ.ಕೆ. ಮಂಗಲಾ, ಶಿವಶರಣಪ್ಪ ವಾಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.