ಬೀದರ್: ರೋಗಮುಕ್ತ ಆರೋಗ್ಯಕರ ಬದುಕಿಗೆ ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಬಳಕೆ ಅತ್ಯವಶ್ಯವಾಗಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧುನಿಕ ಕಾಲದಲ್ಲಿ ಎಲ್ಲೆಡೆ ಮಾಲಿನ್ಯ ಕಾಣುತ್ತಿದ್ದೇವೆ. ಪ್ರಕೃತಿ ವಿಕೋಪ, ಬರಗಾಲ, ಪ್ರವಾಹ, ಹವಾಮಾನ ವೈಪರೀತ್ಯದಂತಹ ಅಗಾಧ ಪರಿಸ್ಥಿತಿಯಲ್ಲಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ವಿವಿಧ ರೋಗಗಳಿಗೆ ಅಂಟಿಕೊಂಡಿದ್ದಾರೆ. ಆದ್ದರಿಂದ ಗುಣಮಟ್ಟದ ಸತ್ವಯುತ ಆಹಾರ ಧಾನ್ಯ ಬಳಕೆ ಅಗತ್ಯವಾಗಿದೆ. ಸಾರ್ವಜನಿಕರು ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬಳಕೆಯಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಸಚಿವರು ನುಡಿದರು.
‘ಸರ್ಕಾರ ಈ ನಿಟ್ಟಿನಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದು ಸಿರಿಧಾನ್ಯ ಬಳಕೆಗೆ ಪ್ರಶಸ್ತಿ ನೀಡಿದೆ. ಎಲ್ಲ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದರು.
ಕೃಷಿ ಹೆಚ್ಚು ಲಾಭದಾಯಕ ಆಗುವ ನಿಟ್ಟಿನಲ್ಲಿ ರೈತರೇ ಕಾಲಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ವಿಜ್ಞಾನಿಗಳನ್ನು ಸಂಪರ್ಕಿಸಿ ಆರ್ಥಿಕವಾಗಿಯೂ ಸದೃಢವಾಗಬೇಕಿದೆ. ಸಿರಿಧಾನ್ಯ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಸಾವಯವ ಕೃಷಿ ವಿಸ್ತರಣೆಗೆ ರೈತರು ಸಿದ್ದರಾಗಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಸಖಿಯರು ಗ್ರಾಮಗಳಲ್ಲಿ ಹೆಚ್ಚೆಚ್ಚು ತಿಳುವಳಿಕೆ ಮೂಡಿಸಬೇಕೆಂದು ಸಚಿವರು ತಿಳಿಸಿದರು.
ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ‘ಸಾವಯವ ಕೃಷಿ ಮಿಷನ್ ರಾಜ್ಯದ ರೈತರಿಗೆ ಮತ್ತೊಮ್ಮೆ ಸಿಗುವಂತಾಲಿ. ರಾಜ್ಯದ ಎಲ್ಲಾ ರೈತರು ಸಾವಯವ ಕೃಷಿ ಬೆಳೆದು ಒಳ್ಳೆಯ ಬೆಲೆ ಸಿಗುವಂತಾಗಲಿ’ ಎಂದರು.
ಬೀದರ್ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ., ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಭವಾನಿ ಕೆ, ಸುನಿಲಕುಮಾರ ಎನ್.ಎಮ್., ಕೃಷಿ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಸಹಾಯಕ ನಿರ್ದೇಶಕ ಅನ್ಸಾರಿ ಸೇರಿದಂತೆ ಕೃಷಿ ಸಖಿಯರು, ರೈತ ಮುಖಂಡರು, ರೈತರು ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.