ADVERTISEMENT

70 ಪ್ರಾರ್ಥನಾ ಮಂದಿರಗಳ ಸ್ಯಾನಿಟೈಸೇಷನ್ ಪೂರ್ಣ

ಶಾಹೀನ್ ಶಿಕ್ಷಣ ಸಂಸ್ಥೆಯಿಂದ ಉಚಿತ ಸ್ಯಾನಿಟೈಸೇಷನ್ ಸೇವೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 10:29 IST
Last Updated 7 ಜೂನ್ 2020, 10:29 IST
ಬೀದರ್‌ನ ಮಂಗಲಪೇಟ್‌ನ ಮೆಥೊಡಿಸ್ಟ್‌ ಚರ್ಚ್‌ ಆವರಣದಲ್ಲಿ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ಸ್ಯಾನಿಟೈಸೇಷನ್ ಮಾಡಲಾಯಿತು
ಬೀದರ್‌ನ ಮಂಗಲಪೇಟ್‌ನ ಮೆಥೊಡಿಸ್ಟ್‌ ಚರ್ಚ್‌ ಆವರಣದಲ್ಲಿ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ಸ್ಯಾನಿಟೈಸೇಷನ್ ಮಾಡಲಾಯಿತು   

ಬೀದರ್: ಕೊರೊನಾ ಸೋಂಕು ತಡೆ ಕಾರ್ಯಗಳಿಗೆ ನೆರವಾಗುತ್ತ ಬಂದಿರುವ ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಇದೀಗ ಪ್ರಾರ್ಥನಾ ಮಂದಿರಗಳ ಉಚಿತ ಸ್ಯಾನಿಟೈಸೇಷನ್ ಸೇವೆಯನ್ನು ಆರಂಭಿಸಿದೆ.

ಮೂರು ದಿನಗಳ ಅವಧಿಯಲ್ಲಿ ಮಂದಿರ, ಮಸೀದಿ, ಚರ್ಚ್ ಸೇರಿದಂತೆ ನಗರದ 70 ಪ್ರಾರ್ಥನಾ ಸ್ಥಳಗಳನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದೆ. ಬರುವ ನಾಲ್ಕು ದಿನಗಳಲ್ಲಿ ಒಟ್ಟು 250 ಪ್ರಾರ್ಥನಾ ಮಂದಿರಗಳ ಸ್ಯಾನಿಟೈಸೇಷನ್ ಗುರಿ ಹೊಂದಿದೆ.

‘ಕೊರೊನಾ ಸೋಂಕಿನ ಪ್ರಯುಕ್ತ ಎರಡೂವರೆ ತಿಂಗಳ ಹಿಂದೆ ಮುಚ್ಚಲಾದ ಪ್ರಾರ್ಥನಾ ಮಂದಿರಗಳು ಜೂನ್ 8 ರಂದು ಬಾಗಿಲು ತೆರೆದುಕೊಳ್ಳಲಿವೆ. ಹೀಗಾಗಿ ಪ್ರಾರ್ಥನಾ ಮಂದಿರಗಳ ಉಚಿತ ಸ್ಯಾನಿಟೈಸೇಷನ್ ಸೇವೆ ಶುರು ಮಾಡಲಾಗಿದೆ’ ಎಂದು ತಿಳಿಸುತ್ತಾರೆ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್.

ADVERTISEMENT

‘ಪ್ರಾರ್ಥನಾ ಮಂದಿರಗಳ ಸ್ವಚ್ಛತೆ ಹಾಗೂ ಸ್ಯಾನಿಟೈಸೇಷನ್‍ಗಾಗಿ ಒಟ್ಟು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ತಲಾ ಏಳು ಮಂದಿ ಸಿಬ್ಬಂದಿ ಇದ್ದಾರೆ’ ಎಂದು ಹೇಳುತ್ತಾರೆ. ‘ತಂಡಗಳ ಸದಸ್ಯರು ಪ್ರಾರ್ಥನಾ ಮಂದಿರಗಳನ್ನು ಮೊದಲು ಶುಚಿಗೊಳಿಸಿ, ನೀರಿನಿಂದ ತೊಳೆದು, ಅನಂತರ ಸ್ಯಾನಿಟೈಝರ್ ಸಿಂಪಡಿಸಿ ಸ್ಯಾನಿಟೈಸೇಷನ್ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ.

‘ಪೊರಕೆ, ಬ್ರಶ್, ವಾಕ್ಯುಮ್ ಮಷೀನ್, ಸ್ಪ್ರೇ, ಫಾಗಿಂಗ್ ಯಂತ್ರ ಮೊದಲಾದವುಗಳನ್ನು ಸ್ಯಾನಿಟೈಸೇಷನ್‍ಗೆ ಬಳಸುತ್ತಿದ್ದಾರೆ. ನೀರು ಇಲ್ಲದ ಪ್ರಾರ್ಥನಾ ಮಂದಿರಗಳಿಗೆ ಟ್ಯಾಂಕರ್ ಮೂಲಕ ನೀರು ಒಯ್ದು ಶುಚಿಗೊಳಿಸುತ್ತಿದ್ದಾರೆ’ ಎಂದು ತಿಳಿಸುತ್ತಾರೆ. ‘ಮೂರು ದಿನಗಳ ಅವಧಿಯಲ್ಲಿ ಜಾಮಾ ಮಸೀದಿ, ನಯಾ ಕಮಾನ್ ಮಸೀದಿ, ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್, ಪಾಂಡುರಂಗ ಮಂದಿರ, ಬಸವ ಮಂಟಪ, ಜನವಾಡ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಭವನ ಸೇರಿ 70 ಪ್ರಾರ್ಥನಾ ಮಂದಿರಗಳನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ’ ಎಂದು ಹೇಳುತ್ತಾರೆ.

‘ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಲು ಮುಂದೆ ಬಂದಿವೆ’ ಎಂದು ವಿವರಿಸುತ್ತಾರೆ. ‘ಪ್ರಾರ್ಥನಾ ಮಂದಿರಗಳ ಪದಾಧಿಕಾರಿಗಳು ಸ್ಯಾನಿಟೈಸೇಷನ್‍ಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಬರುವ ನಾಲ್ಕು ದಿನಗಳಲ್ಲಿ ಇನ್ನೂ 180 ಸೇರಿದಂತೆ ಒಟ್ಟು 250 ಪ್ರಾರ್ಥನಾ ಮಂದಿರಗಳ ಸ್ಯಾನಿಟೈಸೇಷನ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ’ ತಿಳಿಸುತ್ತಾರೆ.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಪ್ರಾರ್ಥನಾ ಮಂದಿರಗಳ ಉಚಿತ ಸ್ಯಾನಿಟೈಸೇಷನ್ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.