ADVERTISEMENT

ಖಾರ ಮೆಣಸಿನಕಾಯಿ ಕೃಷಿಕಗೆ ಸಿಹಿ!

6 ಎಕರೆ ಬೆಳೆ: ₹15 ಲಕ್ಷ ಆದಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:17 IST
Last Updated 1 ಮಾರ್ಚ್ 2026, 6:17 IST
ಬೀದರ್ ತಾಲ್ಲೂಕಿನ ಬಸಂತಪುರ ಗ್ರಾಮದ ಹೊಲದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯೊಂದಿಗೆ ರೈತ ಈರಪ್ಪ ಕಾಳೆ (ಎಡದಿಂದ ಮೂರನೆಯವರು) ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು
ಬೀದರ್ ತಾಲ್ಲೂಕಿನ ಬಸಂತಪುರ ಗ್ರಾಮದ ಹೊಲದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯೊಂದಿಗೆ ರೈತ ಈರಪ್ಪ ಕಾಳೆ (ಎಡದಿಂದ ಮೂರನೆಯವರು) ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು   

ಬಸಂತಪುರ (ಜನವಾಡ): ‘ಆರು ಎಕರೆ ಜಮೀನಿನಲ್ಲಿ ಬೆಳೆದ ಖಾರ ಮೆಣಸಿನಕಾಯಿ ₹15 ಲಕ್ಷ ಆದಾಯ ನೀಡಲಿದೆ. ಖಾರ ಮೆಣಸಿನ ಕಾಯಿ ನನಗೆ ಸಹಿ ನೀಡಲಿದೆ’ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಬೀದರ್ ತಾಲ್ಲೂಕಿನ ಬಸಂತಪುರ ಗ್ರಾಮದ ರೈತ ಈರಪ್ಪ ಕಾಳೆ.

ಚಿಮಕೋಡ್-ಚಿಲ್ಲರ್ಗಿ ರಸ್ತೆಯ ಬದಿಯಲ್ಲಿರುವ ಬಸಂತಪುರ ಗ್ರಾಮದ ಜಮೀನಿನಲ್ಲಿ 5,531 ಸಿಜೆಂಟಾ ತಳಿಯ ಮೆಣಸಿನಕಾಯಿ ಸಮೃದ್ಧವಾಗಿ ಬೆಳೆದಿದೆ. ಸದ್ಯದಲ್ಲೇ ಬೆಳೆ ಕಟಾವು ಕೂಡ ಆಗಲಿದೆ.

ಒಟ್ಟು ಆರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೇನೆ. ಒಂದು ಎಕರೆಯಲ್ಲಿ ಹಸಿ ಮೆಣಸಿನಕಾಯಿ ಹಾಗೂ ಐದು ಎಕರೆಯಲ್ಲಿ ಒಣ ಮೆಣಸಿನಕಾಯಿ ಇದೆ. ಅತಿವೃಷ್ಟಿ ಮಧ್ಯೆಯೂ ಉತ್ತಮ ಬೆಳೆ ಬಂದಿದೆ ಎನ್ನುತ್ತಾರೆ ಈರಪ್ಪ ಕಾಳೆ.

ADVERTISEMENT

ಮೆಣಸಿನಕಾಯಿ ಬೀಜ ಖರೀದಿಸಿ ತಂದು, ಸ್ವತಃ ಸಸಿ ತಯಾರಿಸಿ ಜಮೀನಿನಲ್ಲಿ ಬೆಳೆದಿದ್ದೇನೆ. ಎಕರೆಗೆ 12 ಸಾವಿರದಂತೆ ಒಟ್ಟು 72 ಸಾವಿರ ಸಸಿಗಳನ್ನು ನೆಟ್ಟಿದ್ದೇನೆ. ಬೆಳೆಗಳ ಸಾಲಿನಿಂದ ಸಾಲಿಗೆ 36 ಇಂಚ್ ಹಾಗೂ ಗಿಡದಿಂದ ಗಿಡಕ್ಕೆ 18 ಇಂಚ್ ಅಂತರ ಕಾಯ್ದುಕೊಂಡಿದ್ದೇನೆ ಎಂದು ತಿಳಿಸಿದರು.

ಹೊಲದಲ್ಲಿರುವ ಕೊಳವೆಬಾವಿಯಿಂದ ಬೆಳೆಗೆ ನೀರುಣಿಸಿದ್ದೇನೆ. ಕಾಲ ಕಾಲಕ್ಕೆ ಗೊಬ್ಬರ ಕೊಟ್ಟಿದ್ದೇನೆ. ಕೀಟನಾಶಕ ಸಿಂಪಡಿಸಿದ್ದೇನೆ. ಹೀಗಾಗಿ ಫಸಲು ಒಳ್ಳೆಯ ಗುಣಮಟ್ಟದಿಂದ ಕೂಡಿದೆ. ಮೆಣಸಿನಕಾಯಿ ಎಂಟು ತಿಂಗಳಿಂದ ಒಂಬತ್ತು ತಿಂಗಳ ಬೆಳೆಯಾಗಿದ್ದು, ಒಣ ಮೆಣಸಿನಕಾಯಿ ಕಟಾವಿಗೆ ಬಂದಿದೆ. ಹಸಿ ಮೆಣಸಿನಕಾಯಿ ಮಾರ್ಚ್ 15ರ ನಂತರ ಕಟಾವಿಗೆ ಬರಲಿದೆ’ ಎಂದು ವಿವರಿಸಿದರು.

150 ಕ್ವಿಂಟಲ್ ಹಸಿ ಮೆಣಸಿನಕಾಯಿ ಹಾಗೂ 80 ಕ್ವಿಂಟಲ್ ಒಣ ಮೆಣಸಿನಕಾಯಿ ಇಳುವರಿ ಬರುವ ಅಂದಾಜಿದೆ. ಬೀಜ, ಸಸಿ ತಯಾರಿಕೆ, ಗೊಬ್ಬರ, ಕೀಟನಾಶಕ, ಕಾರ್ಮಿಕರ ಕೂಲಿ ಸೇರಿದಂತೆ ಬೆಳೆಗೆ ಒಟ್ಟು ₹9 ಲಕ್ಷ ಖರ್ಚಾಗಿದೆ. ಸದ್ಯ ಹಸಿ ಮೆಣಸಿನಕಾಯಿ ಬೆಲೆ ಕ್ವಿಂಟಲ್‍ಗೆ ₹4 ಸಾವಿರ ಇದೆ. ಕಳೆದ ವರ್ಷ ಕ್ವಿಂಟಲ್‍ಗೆ ₹15 ಸಾವಿರ ಇದ್ದ ಒಣ ಮೆಣಸಿನಕಾಯಿ ಬೆಲೆ ಈಗ ₹18 ಸಾವಿರದಿಂದ ₹22 ಸಾವಿರಕ್ಕೆ ಏರಿಕೆಯಾಗಿದೆ. ಹೀಗಾಗಿ ಎಲ್ಲ ಖರ್ಚು ಹೊರತುಪಡಿಸಿ ₹15 ಲಕ್ಷ ಆದಾಯದ ನಿರೀಕ್ಷೆ ಹೊಂದಿದ್ದೇನೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

25 ವರ್ಷಗಳಿಂದ ಮೆಣಸಿನಕಾಯಿ ಬೆಳೆಯುತ್ತಾ ಬಂದಿದ್ದೇನೆ. ಗುಣಮಟ್ಟದ ಮೆಣಸಿನಕಾಯಿ ಬೆಳೆಯುವ ಕಾರಣ ಗ್ರಾಹಕರು ಖುದ್ದು ಹೊಲಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಬೀದರ್, ಕಲಬುರಗಿ, ವಿಜಯಪುರ, ಬೆಂಗಳೂರು, ನೆರೆಯ ತೆಲಂಗಾಣದ ಹೈದರಾಬಾದ್ ಸೇರಿದಂತೆ ವಿವಿಧೆಡೆಯಿಂದ ಗ್ರಾಹಕರು ಮಣಸಿನಕಾಯಿ ಖರೀದಿಸುತ್ತಾರೆ. ನಾಲ್ಕು ವರ್ಷದಿಂದ ಬೆಳೆ ಹೊಲದಲ್ಲೇ ಬಿಕರಿ ಆಗುತ್ತಿದೆ. ಮಾರಾಟಕ್ಕೆ ಎಲ್ಲಿಗೂ ಒಯ್ಯುತ್ತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.