ಬೀದರ್: ನಗರದ ನೌಬಾದ್ ಸಮೀಪದ ಚೌಳಿ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಅಯೋಮಯ ಎಂಬಂತಹ ಪರಿಸ್ಥಿತಿ ಇದೆ.
ಈ ಭಾಗದಲ್ಲಿ ರಸ್ತೆಕ್ಕಿಂತ ಗುಂಡಿಗಳೇ ಹೆಚ್ಚಿವೆ. ಆಳುದ್ದದ ಗುಂಡಿಗಳು ಬಿದ್ದಿರುವುದರಿಂದ ಸಂಚರಿಸುವಾಗ ಸ್ವಲ್ಪ ಎಡವಿದರೂ ಕೈ, ಕಾಲು ಮುರಿಯುವುದು ಖಚಿತ. ನಾಲ್ಕು ಚಕ್ರ ಹಾಗೂ ಅದಕ್ಕಿಂತ ಹೆಚ್ಚಿನ ಚಕ್ರದ ವಾಹನಗಳಲ್ಲಿ ಸಂಚರಿಸುವವರು ತೂಗಾಡುತ್ತ ಸಂಚರಿಸಿಕೊಂಡು ಹೋಗಬಹುದು. ಆದರೆ, ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆ ಕಂಟಕವಾಗಿ ಪರಿಣಮಿಸಿದೆ.
ನೌಬಾದ್ ರಾಷ್ಟ್ರೀಯ ಹೆದ್ದಾರಿ ಎದುರಿನ ಚೌಳಿ ಕಮಾನ್ ಮುಖ್ಯರಸ್ತೆಯೂ ಆಟೋ ನಗರ, ಅಲಿಯಾಬಾದ್ ಮೂಲಕ ಜನವಾಡಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ಕಡೆ ಚಿಕ್ಕಪೇಟೆ ರಿಂಗ್‌ರೋಡ್‌ಗೂ ಜೋಡಿಸುತ್ತದೆ.
ಚಿಕ್ಕಪೇಟೆ ರಿಂಗ್‌ರೋಡ್ ಬಹಳ ವ್ಯವಸ್ಥಿತವಾಗಿದೆ. ಆದರೆ, ಚೌಳಿ ಕಮಾನ್‌ನಿಂದ ರಿಂಗ್‌ರೋಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಯಣ ಬಹಳ ಕಷ್ಟದಾಯಕವಾಗಿದೆ. ಈ ರಸ್ತೆಯೂ ಔರಾದ್, ದೇಗಲೂರ ಸೇರಿದಂತೆ ಮಹಾರಾಷ್ಟ್ರದ ಇತರೆ ನಗರಗಳು, ಹೈದರಾಬಾದ್‌ಗೂ ಸಂಪರ್ಕ ಕಲ್ಪಿಸುತ್ತದೆ. ಆದಕಾರಣ ಭಾರಿ ವಾಹನಗಳು, ದೂರದ ಊರುಗಳ ವಾಹನಗಳು ಹಗಲು ರಾತ್ರಿ ಸಂಚರಿಸುತ್ತವೆ.
ಇನ್ನು, ಅಲಿಯಾಬಾದ್‌ನಿಂದ ಜನವಾಡ ವರೆಗೆ ಸಂಚರಿಸುವ ರಸ್ತೆಯೂ ತೀವ್ರ ಹದಗೆಟ್ಟಿದೆ. ಜನವಾಡ, ಕೌಠಾ, ಸಂತಪೂರ, ಔರಾದ್ ಸೇರಿದಂತೆ ಇತರೆ ಕಡೆಗಳಿಗೆ ಹೋಗುವವರು ಈ ಒಳರಸ್ತೆ ಬಳಸುತ್ತಾರೆ. ಒಂದರ್ಥದಲ್ಲಿ ಇದು ಔಟರ್ ರಿಂಗ್‌ರೋಡ್‌ನಂತೆ ಗುರುತಿಸಿಕೊಂಡಿದೆ. ಕಬ್ಬಿನ ಲಾರಿಗಳು, ರೈತರು ಇತರೆ ಉತ್ಪನ್ನಗಳನ್ನು ಹೆಚ್ಚಾಗಿ ಈ ಭಾಗದ ಮೂಲಕ ಸಾಗಿಸಲಾಗುತ್ತದೆ. ಆದರೆ, ಇದು ಕೂಡ ಹದಗೆಟ್ಟಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಆಟೋ ನಗರ ಇದೇ ಭಾಗದಲ್ಲಿ ಇರುವುದರಿಂದ ನಗರದ ಬಹುತೇಕ ವಾಹನಗಳು ಇದೇ ಪ್ರದೇಶಕ್ಕೆ ದುರಸ್ತಿಗೆ ಬರುತ್ತವೆ. ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳು ಸೇರಿವೆ. ಹೀಗಿದ್ದರೂ ಯಾರೂ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.
ಮಳೆ ಬಂದಾಗ ಗುಂಡಿಗಳಲ್ಲಿ ಅಪಾರ ನೀರು ಸಂಗ್ರಹವಾಗುತ್ತದೆ. ಬಿಸಿಲು ಬಿದ್ದಾಗ ದಾರಿ ಹೋಕರಿಗೆ ದೂಳಿನ ಮಜ್ಜವಾಗುತ್ತದೆ. ಹೀಗಿದ್ದರೂ ಯಾರೊಬ್ಬರು ಇದರ ವಿರುದ್ದ ಸೊಲ್ಲೆತ್ತಿಲ್ಲ.
ಚೌಳಿ ಮುಖ್ಯರಸ್ತೆ ಹದಗೆಟ್ಟಿ ಅನೇಕ ತಿಂಗಳುಗಳೇ ಕಳೆದಿವೆ. ಆದರೆ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ಸರಿಪಡಿಸಬೇಕು.–ಶಿವಕುಮಾರ ವಿ. ಸ್ಥಳೀಯ ನಿವಾಸಿ
ಚೌಳಿ ಕಮಾನ್ ನೋಡಿದವರು ಎಂತಹ ಕಮಾನು ಕಟ್ಟಿಸಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆದರೆ ಅದರೊಳಗಿನ ರಸ್ತೆ ನೋಡಿದರೆ ಮುಖ ಚಹರೆ ಬದಲಾಗುತ್ತದೆ. ಹದಗೆಟ್ಟ ರಸ್ತೆಯಿಂದ ಬಹಳ ತೊಂದರೆಯಾಗುತ್ತಿದ್ದು ಕೂಡಲೇ ದುರಸ್ತಿಗೊಳಿಸಬೇಕು.–ಪೃಥ್ವಿ ಸ್ಥಳೀಯ ನಿವಾಸಿ
‘₹9.9 ಕೋಟಿ ಮಂಜೂರು’ ಅಲಿಯಾಬಾದ್ ರಿಂಗ್‌ರೋಡ್‌ನಿಂದ ಚೌಳಿ ಕಮಾನ್ ವರೆಗೆ ವಿದ್ಯುತ್ ದೀಪಗಳ ಚತುಷ್ಪಥ ನಿರ್ಮಾಣಕ್ಕೆ ₹9.9 ಕೋಟಿ ಅನುದಾನ ಮಂಜೂರಾಗಿದ್ದು ಈಗಾಗಲೇ ಟೆಂಡರ್ ಕೂಡ ಆಗಿದೆ. ಕುಡಿಯುವ ನೀರಿನ ಪೈಪ್‌ಲೈನ್ ಸೇರಿದಂತೆ ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿದ್ದು ಅದು ಪೂರ್ಣಗೊಂಡ ನಂತರ ಕಾಮಗಾರಿ ಆರಂಭಿಸಲಾಗುವುದು. –ಶಿವಶಂಕರ ಕಾಮಶೆಟ್ಟಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯೂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.