ADVERTISEMENT

ಬೀದರ್ | ಅಭಿವೃದ್ಧಿ ಕಾಮಗಾರಿಗಳು ನಿಧಾನ: ಲೂಟಿಯೇ ಪ್ರಧಾನ

ಅಭಿವೃದ್ಧಿಗೆ ಗ್ರಹಣ: ಚುನಾಯಿತ ಪ್ರತಿನಿಧಿಗಳ ಜಾಣ ಮೌನ

ಚಂದ್ರಕಾಂತ ಮಸಾನಿ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಬೀದರ್‌ನ ಅಂಬೇಡ್ಕರ್‌ ವೃತ್ತದ ಬಳಿ ಇರುವ ನಗರಸಭೆಯ ಮಳಿಗೆಗಳು
ಬೀದರ್‌ನ ಅಂಬೇಡ್ಕರ್‌ ವೃತ್ತದ ಬಳಿ ಇರುವ ನಗರಸಭೆಯ ಮಳಿಗೆಗಳು   ಚಿತ್ರ: ಗುರುಪಾದಪ್ಪ ಸಿರ್ಸಿ

ಬೀದರ್: ಸರ್ಕಾರದ ಅನೇಕ ಯೋಜನೆಗಳ ಅನುಷ್ಠಾನ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಿದರೂ ನೆಪಮಾತ್ರಕ್ಕೆ ಇದೆ. ಇಲಾಖೆವಾರು ಮಾಹಿತಿ ಜಾಲಾಡ ತೊಡಗಿದರೆ ಅನೇಕ ಅಕ್ರಮಗಳು ನಡೆದಿರುವುದು ಬೆಳಕಿಗೆ ಬರುತ್ತದೆ. ಅಭಿವೃದ್ಧಿ ಕಾಮಗಾರಿಗಳು ನಿಧಾನವಾಗಿ ಸಾಗಿದ್ದರೆ, ಇಲ್ಲಿ ಲೂಟಿಯೇ ಪ್ರಧಾನವಾಗಿದೆ.

ಚುನಾವಣೆ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಪತ್ರಕರ್ತರನ್ನು ಸಭೆಗೆ ಆಹ್ವಾನಿಸಿ, ಸಭೆ ಆರಂಭವಾಗುತ್ತಿದ್ದಂತೆಯೇ ಪತ್ರಕರ್ತರನ್ನು ಹೊರಗೆ ಕಳಿಸಿದ್ದರು. ನಂತರ ಸಭೆಯಲ್ಲಿ ಅನೇಕ ಅಕ್ರಮಗಳು ಬಯಲಿಗೆ ಬಂದಿದ್ದವು. ಅವುಗಳಿಗೆ ಅಧಿಕಾರಿಗಳು ವ್ಯವಸ್ಥಿತವಾಗಿ ತೇಪೆ ಹಾಕಿದರು.

ಜಿಲ್ಲೆಯಲ್ಲಿ ಒಂದಲ್ಲ, ಎರಡಲ್ಲ ಅನೇಕ ಇಲಾಖೆಗಳಲ್ಲಿ ಅಕ್ರಮಗಳು ನಡೆದಿವೆ. ಅಕ್ರಮ ಮಿತಿ ಮೀರಿದ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. ಬೀದರ್‌ ನಗರಸಭೆ ಸಂಪೂರ್ಣ ದಿವಾಳಿ ಎದ್ದು ಹೋಗಿದೆ. ಅಧಿಕಾರಿಗಳೇ ಮುಂದೆ ನಿಂತು ಲೂಟಿ ಮಾಡಿದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ.

ADVERTISEMENT

ಪೌರಾಯುಕ್ತ ಒಂದೇ ದಿನ 358 ನಿವೇಶನಗಳಿಗೆ ಖಾತೆ ನೀಡಿ ಹಣ ಲೂಟಿ ಮಾಡಿರುವುದನ್ನು ನಗರದ ಜನತೆ ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ. ಮಾರಾಟ ಮಳಿಗೆಗಳ ಬಾಡಿಗೆ ಹಂಚಿಕೆಯಲ್ಲೂ ಅಕ್ರಮ ಎಸಗಿದ್ದಾರೆ. ಎಂಟು ಮಂದಿ ಸಿಬ್ಬಂದಿ ತಂಡ ರಚಿಸಿಕೊಂಡು ಲೂಟಿ ಮಾಡಿರುವುದು ಹಿಂದಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

‘ಸಾರ್ವಜನಿಕರು ನಿಯತ್ತಿನಿಂದ ಪಾವತಿಸಿದ ತೆರಿಗೆ ಹಣವನ್ನೂ ಸರ್ಕಾರಕ್ಕೆ ಸಂದಾಯ ಮಾಡದೇ ಲೂಟಿ ಮಾಡಲಾಗಿದೆ. ಇದೇ ಕಾರಣಕ್ಕೆ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ನಗರದ ಗಟಾರಗಳಲ್ಲಿನ ನೀರು ಹರಿದು ಹೋಗುತ್ತಿಲ್ಲ. ರಸ್ತೆಗಳು ಹಾಳು ಬಿದ್ದಿವೆ. ಬಡಾವಣೆಗಳು ಕೊಳೆಗೇರಿಗಳಾಗಿವೆ’ ಎಂದು ಬೀದರ್‌ ಜಿಲ್ಲಾ ಎಸ್‌.ಸಿ., ಎಸ್‌.ಟಿ. ಕೈಗಾರಿಕೆಗಳ ಸಂಘದ ಅಧ್ಯಕ್ಷ ವಿಜಯಕುಮಾರ ಬೇಸರ ವ್ಯಕ್ತಪಡಿಸುತ್ತಾರೆ.

ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷಗಳು ಕಳೆದಿವೆ. ಹಿಂದಿನ ಬಿಜೆಪಿ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನೇ ನಿಗದಿಪಡಿಸಲಿಲ್ಲ. ಚುನಾಯಿತ ಪ್ರತಿನಿಧಿಗಳು ಇದ್ದರೂ ಹಲ್ಲಿಲ್ಲದ ಹಾವಿನಂತಾಗಿದೆ. ಹೀಗಾಗಿ ಅಧಿಕಾರಿಗಳು ನೇರವಾಗಿ ಲೂಟಿಗೆ ಇಳಿದಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್‌ ಸಾರಿಗೆ ಘಟಕದ ಕ್ಯಾಷಿಯರ್ ಕೋಟ್ಯಂತರ ರೂಪಾಯಿ ಲೂಟಿ ಮಾಡಿದರೂ ಆತನಿಂದ ಹಣ ವಸೂಲಿ ಮಾಡಿಲ್ಲ. ಬದಲಾಗಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಸಾರಿಗೆ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.

ಬಸ್‌ ನಿರ್ವಾಹಕರು ತಂದು ಕೊಡುತ್ತಿದ್ದ ನಗದು ಹಣವನ್ನು ಜಮಾ ಮಾಡದೇ ಸ್ವಂತಕ್ಕೆ ಬಳಸಿಕೊಂಡಿರುವುದು ತನಿಖೆ ಸಂದರ್ಭದಲ್ಲಿ ಪತ್ತೆಯಾಗಿದೆ. ಸಾಫ್ಟವೇರ್‌ನಲ್ಲಿ ಚಾಣಕ್ಷತನದಿಂದ ಬದಲಾವಣೆ ಮಾಡಿ ಹಣ ಲೂಟಿ ಮಾಡುತ್ತಿದ್ದ. ಇದೇ ಹಣದಲ್ಲಿ ಅನೇಕ ನಿವೇಶನ ಖರೀದಿಸಿದ್ದಾನೆ. ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.

ಇನ್ನೊಂದು ಅಚ್ಚರಿಯ ಸಂಗತಿಯಂದರೆ ಹೈದರಾಬಾದ್‌ನಿಂದ ಔರಾದ್‌ಗೆ ಬರುತ್ತಿದ್ದ ಪ್ರಯಾಣಿಕ ತನ್ನೊಂದಿಗೆ ಗಿಳಿ ಮರಿ ತರುತ್ತಿದ್ದ. ಗಿಳಿಗೆ ಟಿಕೆಟ್‌ ವಿಧಿಸಲಿಲ್ಲ ಎನ್ನುವ ಸಣ್ಣ ಕಾರಣಕ್ಕೆ ನಿರ್ವಾಹಕನನ್ನು ಒಂದು ತಿಂಗಳು ಅಮಾನತು ಮಾಡಲಾಯಿತು. ಆದರೆ, ಕೋಟ್ಯಂತರ ಲೂಟಿ ಮಾಡಿದ ವ್ಯಕ್ತಿ ರಾಜಾರೋಷವಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ಭೂಸೇನಾ ನಿಗಮ: ಹತ್ತು ವರ್ಷಗಳ ಹಿಂದೆ ಕ್ರೀಡಾ ವಸತಿ ನಿಲಯ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ನಿಗದಿಪಡಿಸಿದ ನಿವೇಶನ ಬಿಟ್ಟು ಖಾಸಗಿಯವರ ಜಮೀನಿನಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಹಾನಿ ಮಾಡಲಾಗಿದೆ.

ಜಿಲ್ಲೆಯ ಶೇಕಡ 50ರಷ್ಟು ಶುದ್ಧ ನೀರಿನ ಘಟಕಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿಲ್ಲ. ಶೆಡ್‌ ನಿರ್ಮಿಸಿದರೂ ಒಳಗೆ ಫಿಲ್ಟರ್‌ ಯಂತ್ರಗಳನ್ನೇ ಅಳವಡಿಸಿಲ್ಲ. ಆದರೆ, ಏಜೆನ್ಸಿಗಳು ಕಾಮಗಾರಿಯ ಪೂರ್ಣ ಬಿಲ್‌ ಪಾವತಿಸಿಕೊಂಡಿವೆ. ಚುನಾಯಿತ ಪ್ರತಿನಿಧಿಗಳಿಗೆ ಮಾಮೂಲುಕೊಟ್ಟು ಬಾಯಿ ಮುಚ್ಚಿಸಲಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ನೆಹರೂ ಕ್ರೀಡಾಂಗಣದ ಕಾಮಗಾರಿ ಐದು ವರ್ಷ ಕಳೆದರೂ ಮುಗಿದಿಲ್ಲ. ಬೀದರ್‌ ತಾಲ್ಲೂಕಿನ ಕಾಡವಾದ ಸಮೀಪ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ ಅತಿಥಿ ಗೃಹ ಬಳಸದೇ ಹಾಳಾಗಿದೆ.

ಸಣ್ಣ ನೀರಾವರಿ ಇಲಾಖೆ: ಜಿಲ್ಲೆಯಲ್ಲಿ ಬಹುತೇಕ ರಾಜಕಾರಣಿಗಳ ಸಂಬಂಧಿಗಳೇ ಗುತ್ತಿಗೆದಾರರಿದ್ದಾರೆ. ಯಾವ ಪಕ್ಷದವರು ಅಧಿಕಾರಕ್ಕೆ ಬರುತ್ತಾರೆಯೋ ಅದೇ ಪಕ್ಷದ ಮುಖಂಡರು ಇಲ್ಲಿ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆಯುತ್ತಾರೆ. ಹಿಂದೆ ಗುಡ್ಡದ ಮಧ್ಯದಿಂದ ಹರಿದು ಹೋಗುವ ನೀರು ಬಳಸಿಕೊಳ್ಳಲು ಕೆರೆ ನಿರ್ಮಿಸಲಾಗಿದೆ. ಅಲ್ಲಿ ವಾಸ್ತವದಲ್ಲಿ ಸರಿಯಾಗಿ ಒಡ್ಡು ನಿರ್ಮಿಸಿಲ್ಲ. ಒಡ್ಡಿನಂತೆ ಮಣ್ಣು ಸುರಿದು ಬಿಲ್‌ ಎತ್ತಿದ ಘಟನೆಗಳು ಇಲ್ಲಿ ನಡೆದಿವೆ.

ಸಮಾಜ ಕಲ್ಯಾಣ ಇಲಾಖೆ: ಮೂರು ವರ್ಷಗಳ ಹಿಂದೆ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸಾಮಗ್ರಿಗಳ ಪೂರೈಕೆಯಲ್ಲಿ ₹ 2 ಕೋಟಿಗೂ ಅಧಿಕ ಅವ್ಯವಹಾರ ನಡೆದಿರುವುದು ಜಿಲ್ಲೆಯ ಜನರಿಗೆ ಗೊತ್ತೇ ಇದೆ. ಸರ್ಕಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದರೂ ಯಾರ ವಿರುದ್ಧವೂ ಇಂದಿಗೂ ಕಠಿಣ ಕ್ರಮ ಕೈಗೊಂಡಿಲ್ಲ.

ಸಮಾಜ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್‌ಗಳಲ್ಲಿ ಇಂದಿಗೂ ಸರಿಯಾದ ಸೌಲಭ್ಯಗಳಿಲ್ಲ. ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ.

ಕಂದಾಯ ಇಲಾಖೆ: ‘ಜಿಲ್ಲೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಕಂದಾಯ ಇಲಾಖೆಯಲ್ಲಿಯೇ ಇದೆ. ಇಲ್ಲಿ ಹಣ ಇಲ್ಲದೇ ಯಾವ ಕೆಲಸಗಳು ಆಗುವುದಿಲ್ಲ’ ಎಂದು ಜನರು ಹೇಳುತ್ತಾರೆ.

ಚಿಟಗುಪ್ಪ, ಕಮಲನಗರ ಹಾಗೂ ಹುಲಸೂರು ತಾಲ್ಲೂಕುಗಳು ಅಕ್ರಮ ಕೆಲಸದಲ್ಲಿ ಮುಂಚೂಣಿಯಲ್ಲಿವೆ. ಚಿಟಗುಪ್ಪದಲ್ಲಿ 50 ವರ್ಷ ಒಳಗಿನವರು ವೃದ್ಧಾಪ್ಯ ವೇತನ ಪಡೆಯುತ್ತಿದ್ದರೆ, ಪತಿ ಜೀವಂತವಾಗಿರುವಾಗಲೇ ಮಹಿಳೆಯರು ವಿಧವಾ ವೇತನ ಪಡೆಯುತ್ತಿರುವ ಪ್ರಕರಣಗಳು ಅನೇಕ ಇವೆ. ಕಂದಾಯ ಇಲಾಖೆಯ ಸಿಬ್ಬಂದಿಗೆ ₹ 5 ಸಾವಿರ ಕೊಟ್ಟರೆ ಸಾಕು ವಿಧವಾ ವೇತನ ಬರುವುದು ಶುರುವಾಗುತ್ತದೆ ಎಂದು ಅನೇಕರು ಹೇಳುತ್ತಾರೆ.

‘ಕಂದಾಯ ಇಲಾಖೆಯ ಸಿಬ್ಬಂದಿ ಹಣ ಪಡೆದು ಅನೇಕ ವಿಧವಾ ವೇತನ ಮಂಜೂರು ಮಾಡಿಸುತ್ತಿದ್ದಾರೆ. ಕೆಲಸಕ್ಕೆ ಗುಳೆ ಹೋದ ವ್ಯಕ್ತಿಯ ಪತ್ನಿಯರು ವಿಧವಾ ವೇತನ ಪಡೆಯುತ್ತಿದ್ದಾರೆ. ಆಶ್ಚರ್ಯವೆಂದರೆ ಜಮೀನ್ದಾರರು, ಸ್ಥಿತಿವಂತರೂ ಮಾಸಾಶನ ಪಡೆಯುತ್ತಿದ್ದಾರೆ. ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಜೆಡಿಎಸ್‌ ಮುಖಂಡ ಅಂಕುಶ ಗೋಖಲೆ ಒತ್ತಾಯಿಸುತ್ತಾರೆ.

ಲೋಕೋಪಯೋಗಿ ಇಲಾಖೆ: ರಸ್ತೆ ನಿರ್ಮಾಣ ಕಾಮಗಾರಿಯಲ್ಲೇ ಅತಿ ಹೆಚ್ಚು ಅಕ್ರಮಗಳು ನಡೆದಿವೆ. ನಿಯಮಾವಳಿ ಪ್ರಕಾರ ರಸ್ತೆಗಳನ್ನು ನಿರ್ಮಿಸದೇ ಬಿಲ್‌ ಪಡೆದ ಉದಾಹರಣೆಗಳು ಅನೇಕ ಇವೆ. 15 ವರ್ಷಗಳ ಹಿಂದೆ ರಸ್ತೆ ನಿರ್ಮಿಸದೆಯೇ ಬಿಲ್‌ ಪಾವತಿಸಿಕೊಂಡ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ ಎಂದು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಯೇ ಹೇಳುತ್ತಾರೆ.

ಹೆದ್ದಾರಿ ಕಾಮಗಾರಿಗಳು ಕಳಪೆ ಅಥವಾ ನಿಧಾನಗತಿಯಲ್ಲಿ ಸಾಗಿರುವುದು ಸಹ ಇದಕ್ಕೆ ಉತ್ತಮ ನಿದರ್ಶನ. ಬೀದರ್‌–ಹುಮನಾಬಾದ್ ಹಾಗೂ ಬೀದರ್‌–ಔರಾದ್‌ ರಸ್ತೆ ಅನೇಕ ವರ್ಷಗಳಿಂದ ನಡೆದಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿ ಅಲ್ಲಲ್ಲಿ ಅರ್ಧಕ್ಕೆ ನಿಂತಿರುವ ಕಾರಣ ಜನ ನಿರಂತರವಾಗಿ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಕಾಮಗಾರಿ ವಿಳಂಬ ಮಾಡಿ ಯೋಜನಾ ವೆಚ್ಚವನ್ನು ಪರಿಷ್ಕರಿಸಿಕೊಳ್ಳುವುದು ಮತ್ತೊಂದು ಕುತಂತ್ರ. ಇದರಲ್ಲಿ ರಾಜಕಾರಣಿಗಳ ಜತೆ ಅಧಿಕಾರಿಗಳೂ ಶಾಮೀಲಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಬೀದರ್‌ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ
ಬೀದರ್‌ನ ನೆಹರೂ ಕ್ರೀಡಾಂಗಣದ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳೇ ಕಳೆದಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.