ADVERTISEMENT

ಬೀದರ್‌ | ಮಾನವ ಕಳ್ಳ ಸಾಗಣೆ ಮೇಲಿರಲಿ ನಿಗಾ; ಈಶ್ವರ ಬಿ. ಖಂಡ್ರೆ

ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:30 IST
Last Updated 2 ಆಗಸ್ಟ್ 2025, 6:30 IST
ಸಭೆಯಲ್ಲಿ ಸಚಿವರಾದ ಈಶ್ವರ ಬಿ. ಖಂಡ್ರೆ ಹಾಗೂ ರಹೀಂ ಖಾನ್‌ ಅವರು ಜಿಲ್ಲಾ ಪಂಚಾಯಿತಿ ವಾರ್ಷಿಕ ವರದಿ ಬಿಡುಗಡೆಗೊಳಿಸಿದರು
ಸಭೆಯಲ್ಲಿ ಸಚಿವರಾದ ಈಶ್ವರ ಬಿ. ಖಂಡ್ರೆ ಹಾಗೂ ರಹೀಂ ಖಾನ್‌ ಅವರು ಜಿಲ್ಲಾ ಪಂಚಾಯಿತಿ ವಾರ್ಷಿಕ ವರದಿ ಬಿಡುಗಡೆಗೊಳಿಸಿದರು   

ಬೀದರ್‌: ‘ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಮಾದಕದ್ರವ್ಯ ಜಾಲದ ಮೇಲೆ ನಿಗಾ ವಹಿಸಿ, ಅದನ್ನು ತಡೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಪೊಲೀಸರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ‍್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟಬೇಕು. ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ ತ್ವರಿತಗೊಳಿಸಿ ನ್ಯಾಯ ಕೊಡಿಸಬೇಕು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದಿದ್ದರೆ ತುರ್ತಾಗಿ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಅಪರಾಧಿಗಳನ್ನು ಹಿಡಿದು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ, ಕಠಿಣ ಶಿಕ್ಷೆ ಕೊಡಿಸಿದರೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಮರುಕಳಿಸುವುದಿಲ್ಲ ಎಂದರು.

ಜಿಲ್ಲೆಯಲ್ಲಿ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು. ಎಲ್ಲೂ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿಯವರು ₹2025 ಕೋಟಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳ ಗುಣಮಟ್ಟದ ಬಗ್ಗೆ ನಿಗಾ ಇಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಖಾತ್ರಿಪಡಿಸಲು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕನಿಷ್ಠ ತಲಾ 5 ಕಾಮಗಾರಿಗಳನ್ನು ಖುದ್ದು ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ಬೀದರ್ ಜಿಲ್ಲೆಯಲ್ಲಿ ಹಲವು ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ವಿದ್ಯಾರ್ಥಿಗಳು ಜೀವ ಭಯದಲ್ಲಿ ಪಾಠ ಕಲಿಯುವ ಸ್ಥಿತಿಯಿದೆ ಎಂಬ ದೂರುಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಜಿಲ್ಲೆಯಲ್ಲಿ ಎಷ್ಟು ಸರ್ಕಾರಿ ಶಾಲಾ-ಕಾಲೇಜು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂಬುದರ ಪಟ್ಟಿ ನೀಡಬೇಕು. ಯಾವ ಕಟ್ಟಡ ಯಾವ ವರ್ಷ ನಿರ್ಮಿಸಲಾಗಿದೆ. ಶಿಥಿಲಾವಸ್ಥೆಗೆ ತಲುಪಲು ಕಾರಣವೇನು ಎಂಬುದರ ಮಾಹಿತಿ ನೀಡಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಂದೀಪ್ ಡಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಇದ್ದರು.

- ಕಳಪೆ ಆರೋಪ; ಸಲಗರ್‌ ಅಸಮಾಧಾನ

‘ಬಸವಕಲ್ಯಾಣದಲ್ಲಿ ಕಾಮಗಾರಿಗಳು ಕಳಪೆ ನಡೆಯುತ್ತಿವೆ. ಹೆಚ್ಚಿನ ಅನುದಾನ ಬರುತ್ತಿದ್ದರೂ ಕಾಮಗಾರಿಗಳು ಗುಣಮಟ್ಟದಿಂದ ಏಕೆ ಆಗುತ್ತಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಜಿ. ಮುಳೆ ಪ್ರಶ್ನಿಸಿದರು. ಇದರಿಂದ ಅಸಮಾಧಾನಗೊಂಡ ಶಾಸಕ ಶರಣು ಸಲಗರ್‌ ಮಧ್ಯ ಪ್ರವೇಶಿಸಿ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಕಳಪೆಯಾದರೆ ತೋರಿಸಿ ಎಂದರು. ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದರು. ‘ಬಸವಕಲ್ಯಾಣದಲ್ಲಿ ಬಹುತೇಕ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಆಗುತ್ತಿವೆ. ಎಲ್ಲೋ ಒಂದೆರಡು ಕಡೆ ಏನಾದರೂ ಆಗಿರಬಹುದು. ಆದರೆ ಎಲ್ಲ ಕಾಮಗಾರಿಗಳು ಕಳಪೆ ಎಂದು ಆರೋಪಿಸುತ್ತಿರುವುದು ಸರಿಯಲ್ಲ’ ಎಂದರು.

ವನ್ಯಜೀವಿಗಳ ಉಪಟಳ; ಪರಿಹಾರಕ್ಕೆ ಆಗ್ರಹ ‘ಬೀದರ್‌ ದಕ್ಷಿಣ ಕ್ಷೇತ್ರ ಸೇರಿದಂತೆ ಜಿಲ್ಲೆಯ ಹಲವೆಡೆ ಜಿಂಕೆ ಕಾಡು ಹಂದಿ ಸೇರಿದಂತೆ ಇತರೆ ವನ್ಯಜೀವಿಗಳ ಉಪಟಳದಿಂದ ರೈತರ ಸಮೃದ್ಧ ಬೆಳೆ ಹಾಳಾಗಿದೆ. ಅದಕ್ಕೆ ಪರಿಹಾರ ಕೊಡಬೇಕು. ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಆಗ್ರಹಿಸಿದರು. ಈ ಬಗ್ಗೆ ಹಿಂದೆಯೂ ನಾನು ಗಮನ ಸೆಳೆದಿದ್ದೆ. ರೈತರ ಹೊಲಗಳಿಗೆ ಸೋಲಾರ್ ತಂತಿ ಅಳವಡಿಕೆ ಅಗತ್ಯವಿದೆ. ಆದರೆ ಇದಕ್ಕೆ ಸ್ಪಂದಿಸಿಲ್ಲ. ಅರಣ್ಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಒದಗಿಸಬೇಕು ಎಂದರು. ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ವೇತನ ಹೆಚ್ಚಿಸಬೇಕು. ಕೆಕೆಆರ್‌ಡಿಬಿ ಅನುದಾನದಡಿ ವೇತನ ನೀಡಬಹುದು. ಹೃದಯಾಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ಮಾರಾಟವಾಗುತ್ತಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.

‘ಉಡುಪಿಯಲ್ಲೇಕೆ ಉತ್ತಮ ರಿಸಲ್ಟ್‌ ಬರುತ್ತೆ’ ಬಸವಕಲ್ಯಾಣದ ಶಾಸಕ ಶರಣು ಸಲಗರ್‌ ಮಾತನಾಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿದೆ. ಜಿಲ್ಲೆಯ ಕೆಲವು ಶಿಕ್ಷಕರಿಗೆ ವಿಷಯ ಸರಿಯಾಗಿ ಹೇಳಿಕೊಡಲು ಆಗುತ್ತಿಲ್ಲ. ಉಡುಪಿ ಚಿಕ್ಕಮಗಳೂರಿನಲ್ಲಿ ಉತ್ತಮ ರಿಸಲ್ಟ್‌ ಬರುತ್ತೆ. ಅಲ್ಲೇಕೆ ಬರುತ್ತಿದೆ. ನಮ್ಮಲ್ಲೇಕೆ ಬರುತ್ತಿಲ್ಲ ಎನ್ನುವುದರ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ ಎಂದು ಸಭೆಯ ಗಮನ ಸೆಳೆದರು. ನಮ್ಮ ಜಿಲ್ಲೆಯ ಯಾವ ಮಕ್ಕಳು ದಡ್ಡರಿಲ್ಲ. ನಾವು ಸರಿಯಾಗಿ ಪಾಠ ಮಾಡುತ್ತಿಲ್ಲ. ಬೇರೆ ಕಡೆಯಿಂದ ಎಕ್ಸ್‌ಪರ್ಟ್‌ಗಳನ್ನು ಕರೆತಂದು ಪಾಠ ಮಾಡಬೇಕು. ಖುದ್ದು ಅಧಿಕಾರಿಗಳೇ ಹೋಗಿ ಪಾಠ ಕೇಳಬೇಕು. ತಿಂಗಳಲ್ಲಿ ಒಂದು ದಿನ ಇದನ್ನು ಮಾಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರ ಬಿ. ಖಂಡ್ರೆ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ತಜ್ಞ ಬೋಧಕರ ಮೂಲಕ ಪಾಠ ಮಾಡಿಸಬೇಕು. ಅದಕ್ಕೆ ಉಡುಪಿ ಮಂಗಳೂರಿನವರೇ ಬೇಕು ಅಂತ ಏನೂ ಇಲ್ಲಾ. ನಮ್ಮಲ್ಲೇ ಅನೇಕರು ಪ್ರತಿಭಾವಂತರಿದ್ದಾರೆ. ಅಂತಹವರನ್ನು ಹುಡುಕಿ ಕರೆತರುವ ಕೆಲಸವಾಗಬೇಕು ಎಂದರು. ಜಿಲ್ಲೆಯಲ್ಲಿ ಕ್ಲಸ್ಟರ್ ರಚಿಸಿ ಇಂಗ್ಲಿಷ್ ಗಣಿತ ವಿಜ್ಞಾನ ಸಮಾಜಶಾಸ್ತ್ರ ವಿಷಯದ ತಜ್ಞ ಬೋಧಕರಿಂದ ಪರೀಕ್ಷೆಗೆ ಸಿದ್ಧತೆ ಮಾಡಿಸಿ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಬೇಕು. ಜಿಲ್ಲಾ ಕೇಂದ್ರ ಮತ್ತು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಶಾಲೆಗಳಲ್ಲಿರುವ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಪುನರ್ ಮನನ ತರಗತಿ ನಡೆಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ  ತಿಳಿಸಿದರು.

ಶಿಸ್ತು ಕ್ರಮಕ್ಕೆ ಆಗ್ರಹ ಹುಮನಾಬಾದ್‌ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಮಾತನಾಡಿ ಜು. 22ರಂದು ಹುಮನಾಬಾದ್‌ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಏರ್ಪಡಿಸಿದ್ದ ಕಂದಾಯ ಇಲಾಖೆಯ ಸಿಬ್ಬಂದಿಗೆ ಲ್ಯಾಪ್‌ಟಾಪ್‌ ವಿತರಣೆ ಸಮಾರಂಭದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಚಿವರ ಗಮನ ಸೆಳೆದರು. ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.