ADVERTISEMENT

ಉದ್ಘಾಟನೆಗೆ ಜಿಲ್ಲಾ ಕ್ರೀಡಾಂಗಣ ಸಜ್ಜು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 15:15 IST
Last Updated 5 ಫೆಬ್ರುವರಿ 2020, 15:15 IST
ಬೀದರ್‌ನಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಜಿಲ್ಲಾ ಕ್ರೀಡಾಂಗಣ
ಬೀದರ್‌ನಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಜಿಲ್ಲಾ ಕ್ರೀಡಾಂಗಣ   

ಬೀದರ್‌: ನವೀಕರಣಗೊಂಡಿರುವ ಇಲ್ಲಿಯ ಜಿಲ್ಲಾ ಕ್ರೀಡಾಂಗಣ ಫೆ.7ರಂದು ಉದ್ಘಾಟನೆಗೆ ಸಜ್ಜಾಗಿದೆ.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರ ಪ್ರಯತ್ನದ ಫಲವಾಗಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕ್ರೀಡಾಂಗಣಕ್ಕೆ ಅನುದಾನ ಒದಗಿಸಿತ್ತು. ಹಳೆಯದಾದ ಕ್ರೀಡಾಂಗಣದ ಗ್ಯಾಲರಿಯನ್ನು ಎರಡು ವರ್ಷಗಳ ಹಿಂದೆಯೇ ನೆಲಸಮಗೊಳಿಸಿದರೂ ಕಾಮಗಾರಿ ವೇಗ ಪಡೆದುಕೊಂಡಿರಲಿಲ್ಲ. ಇದೀಗ ಎರಡು ವರ್ಷಗಳ ನಂತರ ಉದ್ಘಾಟನೆಗೆ ಅಣಿಯಾಗಿದೆ.

ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ಗೆ ಕೊಡಲಾಗಿತ್ತು. ಒಪ್ಪಂದ ಪ್ರಕಾರ ಕಳೆದ ವರ್ಷವೇ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕ್ರೀಡಾಂಗಣದ ವಿನ್ಯಾಸಕ್ಕೆ ಕ್ರೀಡಾಪಟುಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲಾಧಿಕಾರಿ ಅವರು ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದರು. ಆದರೆ ಕಾಮಗಾರಿಯಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಕ್ರೀಡಾಂಗಣಕ್ಕೆ ನಾಲ್ಕು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ನಾಲ್ಕು ಕಡೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದರೂ ಮೊದಲಿದ್ದ ಗ್ಯಾಲರಿಗಿಂತ ಈಗಿನ ಗ್ಯಾಲರಿ ವಿಸ್ತಾರ ಕಡಿಮೆಯಾಗಿದೆ.

ADVERTISEMENT

ಎರಡು ವರ್ಷಗಳಿಂದ ನಗರದಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಬಹುತೇಕ ಕ್ರೀಡಾಕೂಟಗಳನ್ನು ಕಮಠಾಣ ಸಮೀಪದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿಯೇ ನಡೆಸಲಾಗಿದೆ. ಒಂದು ವರ್ಷದಿಂದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.