ಬೀದರ್: ಬೌ.. ಬೌ.., ಕುಂಯಿ.. ಕುಂಯಿ.., ಘುರ್.. ಘುರ್.. ಹೀಗೆ ನಾನಾ ಬಗೆಯ ಸದ್ದಿನ ಮೂಲಕ ಗಮನ ಸೆಳೆದದ್ದು ವಿವಿಧ ತಳಿಯ ನಾಯಿಗಳು. ಕೆಲವು ನಾಯಿಗಳು ನೋಡಲು ಹೂವಿನಂತೆ ನಾಜೂಕು, ಮತ್ತೆ ಕೆಲವು ವ್ಯಾಘ್ರ. ಅವುಗಳ ಆಟ ಒಂದೆರಡಲ್ಲ. ಅವುಗಳನ್ನು ಸಂಭಾಳಿಸಿ, ಜನರ ಮುಂದೆ ತಂದು ಪ್ರದರ್ಶಿಸಿದ್ದೇ ದೊಡ್ಡ ಸಾಹಸವಾಗಿತ್ತು.
ಚೌಕಾಕಾರದ ಸ್ಥಳದಲ್ಲಿ ಒಂದರ ಹಿಂದೆ ಒಂದು ನಾಯಿ ಹೆಜ್ಜೆ ಹಾಕುತ್ತ ಹೋದಾಗ ಥೇಟ್ ರ್‍ಯಾಂಪ್ ಮೇಲೆ ರೂಪದರ್ಶಿಯರು ನಡೆದ ಅನುಭವ. ಇದನ್ನು ನೋಡಿ ಜನ ಕರತಾಡನ, ಶಿಳ್ಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
‘ಸೈಬೇರಿಯನ್ ಹಸ್ಕಿ’, ‘ಬೆಲ್ಜಿಯಂ ಮಲ್ನೈಸ್’, ‘ಪಮೇರಿಯನ್’, ಭಾರತೀಯ ಸೇನೆಗೆ ಸೇರಿಸಿರುವ ‘ಮುಧೋಳ ಹೌಂಡ್’ ನಾಯಿಗಳು ಎಲ್ಲರ ಗಮನ ಸೆಳೆದು ಚಪ್ಪಾಳೆ ಗಿಟ್ಟಿಸಿದವು. ‘ಪಪ್ಪಿ ರೌಂಡ್’, ‘ಲ್ಯಾಬ್ರಾಡರ್ ರಿಟ್ರಿವರ್’, ‘ಜರ್ಮನ್ ಶೆಫರ್ಡ್’, ‘ಪಮೇರಿಯನ್’ ಜಾತಿಯ ಗಂಡು ಮತ್ತು ಹೆಣ್ಣು ನಾಯಿಗಳ ವಿಭಾಗದ ನಾಯಿಗಳನ್ನು ಪ್ರದರ್ಶಿಸಲಾಯಿತು. ಪಶು ವೈದ್ಯಾಧಿಕಾರಿಗಳು ನಾಯಿಗಳ ಹಲ್ಲು, ಅದರ ನಡಿಗೆ, ಮೈಕಟ್ಟು, ಚುರುಕುತನ, ಅದರ ಒಟ್ಟಾರೆ ಆರೋಗ್ಯವನ್ನು ಸ್ಥಳದಲ್ಲೇ ಪರೀಕ್ಷಿಸಿ ಬಹುಮಾನಕ್ಕೆ ಆಯ್ಕೆ ಮಾಡಿದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ವಿ.ವಿ. ಆವರಣದಲ್ಲಿ ಏರ್ಪಡಿಸಿದ್ದ ಶ್ವಾನ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳಿವು.
ಕುಲಪತಿ ಡಾ.ಕೆ.ಸಿ.ವೀರಣ್ಣ ಬಹುಮಾನ ವಿತರಿಸಿದರು.
ಆಡಳಿತ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ, ಕಾರ್ಯಕ್ರಮದ ಸಂಯೋಜಕ ಡಾ.ಚನ್ನಪ್ಪಗೌಡ, ತಹಶೀಲ್ದಾರ್ ದತ್ತಾತ್ರೇಯ ಗಾದಾ, ಡಾ.ಬಸವರಾಜ, ಡಾ.ಗೌತಮ ಅರಳಿ, ಡಾ.ಸುರೇಶ, ಡಾ.ಸತೀಶ ಬಿರಾದಾರ, ಡಾ.ಭುರೆ ಮತ್ತಿತರರು ಹಾಜರಿದ್ದರು.
ವಿವಿಧ ಭಾಗಗಳಿಂದ ಜನ ಬಂದು ಪ್ರದರ್ಶನ ಕಣ್ತುಂಬಿಕೊಂಡರು. 120ಕ್ಕೂ ಹೆಚ್ಚು ನಾಯಿಗಳು ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಜೊತೆಗೆ ತಮ್ಮೊಂದಿಗೆ ಸಾಕು ನಾಯಿಗಳನ್ನು ಕೆಲವರು ಕರೆ ತಂದಿದ್ದರು. ಎಲ್ಲ ನಾಯಿಗಳಿಗೆ ಪಶು ವಿ.ವಿಯಿಂದ ಇದೇ ಸಂದರ್ಭದಲ್ಲಿ ಉಚಿತವಾಗಿ ನಾಯಿಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಯಿತು. ನಾಯಿಗಳ ಆರೈಕೆ ಬಗ್ಗೆ ಮಾರ್ಗದರ್ಶನ ಕೂಡ ಮಾಡಿದರು.
ಮೇಳಕ್ಕೆ ತೆರೆ
ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ವಿ.ವಿ ಆವರಣದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಜಾನುವಾರು ಕುಕ್ಕುಟ ಮತ್ತು ಮತ್ಸ್ಯಮೇಳಕ್ಕೆ ಭಾನುವಾರ ತೆರೆ ಬಿತ್ತು. ಕೊನೆ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಕುಟುಂಬ ಸದಸ್ಯರೊಂದಿಗೆ ಮೇಳಕ್ಕೆ ಬಂದು ವಿವಿಧ ತಳಿಯ ಜಾನುವಾರು ಬಗೆ ಬಗೆಯ ಕೋಳಿಗಳು ಅಲಂಕಾರಿಕ ಮೀನುಗಳನ್ನು ಕಣ್ತುಂಬಿಕೊಂಡರು.
‘ದೀಪಾ’ ಬುದ್ಧಿಮತ್ತೆ ಪರೀಕ್ಷೆ
ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳಕ್ಕೆ ಸೇರಿದ ‘ದೀಪಾ’ ಎಂಬ ಹೆಣ್ಣು ನಾಯಿಯ ಬುದ್ಧಿಮತ್ತೆ ಚುರುಕುತನವನ್ನು ಶ್ವಾನ ಪ್ರದರ್ಶನದಲ್ಲಿ ಒರೆಗೆ ಹಚ್ಚಲಾಯಿತು. ಡಿಎಆರ್ ಶ್ವಾನ ದಳದ ಅಶೋಕ ಕುಮಾರ ಅವರು ಕೊಟ್ಟ ಎಲ್ಲ ಸೂಚನೆಗಳನ್ನು ‘ದೀಪಾ’ ಪಾಲಿಸಿ ನೆರೆದವರ ಗಮನ ಸೆಳೆದಳು. ಓಡು ಎಂದರೆ ಓಡುವುದು ಮಲಗು ಎಂದರೆ ಮಲಗುವುದು ಎದ್ದು ನಿಲ್ಲು ಎಂದರೆ ನಿಂತುಕೊಳ್ಳುವುದು ಜನರ ಮಧ್ಯೆ ಮಾದಕ ವಸ್ತು ಬಚ್ಚಿಟ್ಟು ಆನಂತರ ಅದರ ವಾಸನೆ ತೋರಿಸಿದಾಗ ‘ದೀಪಾ’ ನಿರ್ದಿಷ್ಟ ವ್ಯಕ್ತಿ ಬಳಿ ಹೋಗಿ ಗುರುತಿಸಿದಾಗ ಜನ ಚಪ್ಪಾಳೆ ಹೊಡೆದು ಮೆಚ್ಚುಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.