ADVERTISEMENT

ಪರಿಸರ ಉಳಿಸಿದರೆ ಅದು ನಮ್ಮನ್ನು ಉಳಿಸುತ್ತೆ: ಸಚಿವ ಈಶ್ವರ ಖಂಡ್ರೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:22 IST
Last Updated 19 ಅಕ್ಟೋಬರ್ 2025, 6:22 IST
ಬೀದರ್‌ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸಚಿವ ಈಶ್ವರ ಬಿ. ಖಂಡ್ರೆ, ಮಂಡಳಿ ಅಧ್ಯಕ್ಷ ಪಿ.ಎಮ್‌. ನರೇಂದ್ರ ಸ್ವಾಮಿ ಉದ್ಘಾಟಿಸಿದರು
ಬೀದರ್‌ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸಚಿವ ಈಶ್ವರ ಬಿ. ಖಂಡ್ರೆ, ಮಂಡಳಿ ಅಧ್ಯಕ್ಷ ಪಿ.ಎಮ್‌. ನರೇಂದ್ರ ಸ್ವಾಮಿ ಉದ್ಘಾಟಿಸಿದರು   

ಬೀದರ್‌: ‘ನಾವು ಪರಿಸರವನ್ನು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕು’ ಎಂದು ಪರಿಸರ, ಅರಣ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೃಕ್ಷೋ ರಕ್ಷತಿ ರಕ್ಷಿತಃ ಮಾತು ಪ್ರಸ್ತಾಪಿಸಿದ ಅವರು, ಈ ಮಾತಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಎಲ್ಲರೂ ಸ್ವಚ್ಛತೆ ಕಾಪಾಡಬೇಕು. ಪರಿಸರ ಮಾಲಿನ್ಯವಾಗದಂತೆ ಎಚ್ಚರ ವಹಿಸಬೇಕು. ಮರ, ಗಿಡ ಬೆಳೆಸಲು ಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳು ಮರ ದತ್ತು ಪಡೆದು ಪೋಷಿಸಿ ಬೆಳೆಸಿದರೆ ಹಸಿರಿನ ಪ್ರಮಾಣ ಹೆಚ್ಚಾಗುತ್ತದೆ ಎಂದರು.

ಶೇ 30ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ರಾಜ್ಯದಲ್ಲಿ ಶೇ 21ರಷ್ಟಿದೆ. ಇದು ಶೇ 33ರಷ್ಟು ಆಗಬೇಕಾದರೆ ಹೆಚ್ಚೆಚ್ಚೂ ಗಿಡ, ಮರ ಬೆಳೆಸಬೇಕು. ನಾನು ಅರಣ್ಯ ಸಚಿವನಾದ ನಂತರ ಕಳೆದ ಎರಡುವರೆ ವರ್ಷದಲ್ಲಿ ರಾಜ್ಯದಲ್ಲಿ 11 ಕೋಟಿ ಸಸಿಗಳನ್ನು ನೆಡಿಸಿದ್ದೇನೆ. ಏಳು ಸಾವಿರ ಹೆಕ್ಟೇರ್‌ಗೂ ಅಧಿಕ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಿದ್ದೇನೆ. ಬೀದರ್‌ ಜಿಲ್ಲೆಯಲ್ಲಿ 40 ಲಕ್ಷ ಸಸಿಗಳನ್ನು ನೆಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹಸಿರು ಹೊದಿಕೆ ಹೆಚ್ಚಾಗಲಿದೆ. ಕಲ್ಯಾಣ ಕರ್ನಾಟಕದ ಹಸಿರಿನ ಹೊದಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ತ್ಯಾಜ್ಯ ನೀರು ಸಂಸ್ಕರಿಸುವ ನಿಟ್ಟಿನಲ್ಲಿ ಬೀದರ್‌ನಲ್ಲಿ 50 ಎಮ್‌ಎಲ್‌ಡಿ ತ್ಯಾಜ್ಯ ನೀರು ಸಂಸ್ಕರಿಸಿ ಶುದ್ಧೀಕರಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಈಗಲೂ ಅನೇಕ ಕಡೆ ಮನೆಗಳಲ್ಲಿ ಚರಂಡಿ ಸಂಪರ್ಕ ಇಲ್ಲ. ಅದೆಲ್ಲ ನದಿ ಸೇರಿ ಕಲುಷಿತವಾಗುತ್ತಿದೆ. ಇದರಿಂದ ಅನೇಕ ಪ್ರಕಾರದ ರೋಗಗಳು ಬರುತ್ತಿವೆ. ಇದರ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಮ್‌. ನರೇಂದ್ರ ಸ್ವಾಮಿ ಮಾತನಾಡಿ, ಮಂಡಳಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಜನಸಾಮಾನ್ಯರ ನಡುವೆ ಹೋಗಿ ಜಾಗೃತಿ ಉಂಟು ಮಾಡಲಾಗುತ್ತಿದೆ. ಇದರ ಕಾಯ್ದೆ ಬಗ್ಗೆ ತಿಳಿಸಲಾಗುತ್ತಿದೆ. ಗಾಳಿ, ನೀರು ಶುದ್ಧವಾಗಿದ್ದರೆ ಮನುಷ್ಯ ಆರೋಗ್ಯವಾಗಿರಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.

ಮಂಡಳಿ ಸದಸ್ಯ ಶರಣಕುಮಾರ್‌ ಮೋದಿ, ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖರ ಪಾಟೀಲ್‌, ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯ್ಕ, ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್‌ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಶ್ರೀನಿವಾಸ್‌ ಯರಡೋಣಿ, ಪರಿಸರ ಇಲಾಖೆಯ ಅಧಿಕಾರಿಗಳಾದ ಲಿಂಗರಾಜ, ವಿನೋದ್‌ ಅಪ್ಪೆ ಮತ್ತಿತರರು ಇದ್ದರು.

ಚನ್ನಬಸವ ಹೇಡೆ ನಿರೂಪಿಸಿದರು.ಮಲ್ಲಿಕಾರ್ಜುನ ಸ್ವಾಮಿ ನಾಡಗೀತೆ ಹಾಡಿದರು. ಕಲಬುರಗಿಯ ಹಿರಿಯ ಪರಿಸರ ಅಧಿಕಾರಿ ಎಸ್‌. ಮುರಳೀಧರ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸಂವಿಧಾನದ ಪೀಠಿಕೆ ಓದಿದರು. ಸಚಿವ ಈಶ್ವರ ಬಿ. ಖಂಡ್ರೆ ಪೀಠಿಕೆ ಓದಿಸಿದರು

ಪಕ್ಷಿಧಾಮಕ್ಕೆ ಡಿಸೆಂಬರ್‌ನಲ್ಲಿ ಚಾಲನೆ

ಬೀದರ್‌ನಲ್ಲಿ ಪಕ್ಷಿಧಾಮ ಸ್ಥಾಪನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದ್ದು ಡಿಸೆಂಬರ್‌ನೊಳಗೆ ಚಾಲನೆ ನೀಡಲಾಗುವುದು. ಸ್ಥಳೀಯರೊಂದಿಗೆ ನೆರೆಯ ತೆಲಂಗಾಣ ಮಹಾರಾಷ್ಟ್ರದವರಿಗೆ ಪಕ್ಷಿಗಳ ವೀಕ್ಷಣೆ ಅಧ್ಯಯನಕ್ಕೆ ಅನುಕೂಲವಾಗಲಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಹೊನ್ನಿಕೇರಿಯಲ್ಲಿ ಟ್ರೆಕ್ಕಿಂಗ್‌ ಕಾಮಗಾರಿ ಬರುವ ಮಾರ್ಚ್‌ನೊಳಗೆ ಪೂರ್ಣಗೊಳಿಸಲಾಗುವುದು. ಇದರೊಂದಿಗೆ ಬೀದರ್‌ನ ದೇವ ದೇವ ವನದ ಅಭಿವೃದ್ಧಿ ಮಾಡಲಾಗುವುದು. ಅರಣ್ಯ ಪರಿಸರಕ್ಕೆ ಪೂರಕವಾದ ಕೆಲಸಗಳನ್ನು ಕೈಗೆತ್ತಿಕೊಂಡು ಜಿಲ್ಲೆಯ ಹಸಿರಿನ ಹೊದಿಕೆ ಹೆಚ್ಚಿಸಲಾಗುವುದು. ಸ್ವಚ್ಛ ಸುಂದರ ಹಾಗೂ ನಿರ್ಮಲ ಬೀದರ್‌ ಮಾಡಲಾಗುವುದು ಎಂದರು.

ಬೀದರ್‌ ಜಿಲ್ಲೆಯ ಎಲ್ಲಾ ರಸ್ತೆಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂಚರಿಸಿ ಪ್ಲಾಸ್ಟಿಕ್‌ ತ್ಯಾಜ್ಯ ತೆರವಿಗೆ ದೊಡ್ಡ ಅಭಿಯಾನ ನಡೆಸಲಾಗುವುದು. ಈಗಾಗಲೇ ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಹೆಚ್ಚೆಚ್ಚೂ ಮರ ಗಿಡ ಬೆಳೆಸಲು ಪ್ರತಿ ಜಿಲ್ಲೆಗೆ ₹25 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ದೀಪಾವಳಿಗೆ ಹಸಿರು ಪಟಾಕಿ ಸಿಡಿಸಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಹಸಿರು ಪಟಾಕಿ ಸಿಡಿಸಬೇಕು. ಪಟಾಕಿಗಳ ವಿಪರೀತ ಬಳಕೆಯಿಂದ ಮಕ್ಕಳ ಕಣ್ಣುಗಳು ಹೋಗುತ್ತಿವೆ. ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪರಿಸರ ವಿಷವಾಗಿ ಗ್ಯಾಸ್‌ ಚೇಂಬರ್‌ ಆಗುತ್ತಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಚಿವ ಈಶ್ವರ ಬಿ. ಖಂಡ್ರೆ ಸಲಹೆ ನೀಡಿದರು.

ದೀಪಾವಳಿಯಲ್ಲಿ ರಾತ್ರಿ 8ರಿಂದ ರಾತ್ರಿ 10ರ ತನಕ ಪಟಾಕಿ ಸುಡಬೇಕು. ಎಲ್ಲರೂ ಕಟ್ಟುನಿಟ್ಟಿನಿಂದ ನಿಯಮ ಪಾಲಿಸಬೇಕು. ಗಣೇಶ ಉತ್ಸವದ ಸಂದರ್ಭದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಬದಲು ಮಣ್ಣಿನ ಗಣೇಶನ ಮೂರ್ತಿಗಳನ್ನು ಬದಲಿಸಬೇಕೆಂದು ತಿಳಿಸಲಾಗಿತ್ತು. ಆದರೆ ರಾಜ್ಯದ ಕಾರವಾರ ಮಂಗಳೂರು ಉಡುಪಿಯಲ್ಲಿ ಶೇ 95ರಷ್ಟು ಅನುಷ್ಠಾನಕ್ಕೆ ಬಂದಿದೆ. ಮಿಕ್ಕುಳಿದ ಕಡೆ ಆ ಕೆಲಸವಾಗಿಲ್ಲ. ರಾಸಾಯನಿಕ ಲೋಹದ ವಸ್ತುಗಳಿರುವ ಪಿಒಪಿ ಮೂರ್ತಿಗಳಿಂದ ಜಲಚರಗಳು ಸಾವನ್ನಪ್ಪುತ್ತಿವೆ. ನೀರೆಲ್ಲ ಕಲುಷಿತವಾಗುತ್ತಿದೆ ಎಂದರು.

ಇಂದಿರಾ ಗಾಂಧಿ ರಾಜೀವ್‌ ಗಾಂಧಿ ಕೊಡುಗೆ ಸ್ಮರಣೆ

ಪರಿಸರ ಪ್ರಕೃತಿ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ರಾಜೀವ್‌ ಗಾಂಧಿ ಮನಮೋಹನ್‌ ಸಿಂಗ್‌ ಯುಪಿಎ ಸರ್ಕಾರದ ಸಲಹಾ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಮ್‌. ನರೇಂದ್ರ ಸ್ವಾಮಿ ಸ್ಮರಿಸಿದರು.

ನರೇಂದ್ರ ಸ್ವಾಮಿ ಮಾತನಾಡಿ ಇಂದಿರಾ ಗಾಂಧಿ ಅವರು 1974ರಲ್ಲಿ ಜಲ ಕಾಯ್ದೆ ಜಾರಿಗೆ ತಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಚನೆಗೆ ನಾಂದಿ ಹಾಡಿದರು. ಇದಾದ ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹುಲಿ ಸಂರಕ್ಷಣಾ ಯೋಜನೆ ಜಾರಿಗೆ ತಂದರು. 1984ರಲ್ಲಿ ರಾಜೀವ್‌ ಗಾಂಧಿ ಅವರು ಪರಿಸರ ಸಂರಕ್ಷಣೆ 1989ರಲ್ಲಿ ರಾಷ್ಟ್ರೀಯ ವನ್ಯಜೀವಿ ನೀತಿ ಜಾರಿಗೊಳಿಸಿದರು.

2011ರಲ್ಲಿ ಯುಪಿಎ ಸರ್ಕಾರವಿದ್ದಾಗ ಮನಮೋಹನ್‌ ಸಿಂಗ್‌ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ಥಾಪಿಸಿ ಪರಿಸರ ವನ್ಯಜೀವಿಗಳ ಸಂರಕ್ಷಣೆಗೆ ಕ್ರಮ ಕೈಗೊಂಡರು. ಇವರೆಲ್ಲರ ದೂರದೃಷ್ಟಿಯ ಫಲವಾಗಿ ಜಾಗೃತಿ ಮೂಡಿದೆ. ಆ ಕೆಲಸ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು. ಸಚಿವ ಖಂಡ್ರೆ ಅವರು ತಮ್ಮ ಭಾಷಣದಲ್ಲಿ ಇದೇ ವಿಷಯ ಪುನರುಚ್ಚರಿಸಿದರು.

ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಮ್‌. ನರೇಂದ್ರ ಸ್ವಾಮಿ ಅವರು ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಎಸ್‌.ವಿ. ಕಲ್ಮಠ ಪರಿಸರ ಲೇಖಕ ಸಂಗಮೇಶ ಜವಾದಿ ಹಾಗೂ ಪರಿಸರ ಹೋರಾಟಗಾರ ಶೈಲೇಂದ್ರ ಕಾವಡಿ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.