ADVERTISEMENT

ಬೀದರ್‌ | ಪರಿಹಾರ ವಿತರಣೆ: ತಾರತಮ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಅಂಚೆ ಕಚೇರಿ ಸಮೀಪದ ಕೃಷಿ ಇಲಾಖೆಯ ಕಚೇರಿ ವರೆಗೆ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2025, 5:14 IST
Last Updated 30 ನವೆಂಬರ್ 2025, 5:14 IST
ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೀದರ್‌ನಲ್ಲಿ ಶನಿವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು
ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೀದರ್‌ನಲ್ಲಿ ಶನಿವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಬೀದರ್‌: ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ರೈತರ ನಡುವೆ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ನಗರದ ಗಣೇಶ ಮೈದಾನದಲ್ಲಿ ಸೇರಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಂಚೆ ಕಚೇರಿ ಸಮೀಪದ ಕೃಷಿ ಇಲಾಖೆಯ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಪೊಲೀಸರು ಕೃಷಿ ಕಚೇರಿ ಎದುರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಅಲ್ಲಿಯೇ ತಡೆದರು. ಇಲಾಖೆಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರ್‍ಯಾಲಿಯುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್‌ ವಿರುದ್ಧ ಘೋಷಣೆಗಳನ್ನು ಹಾಕಿದರು. ಅವರ ಭಾವಚಿತ್ರ ಹಿಡಿದು ದಿಕ್ಕಾರ, ದಿಕ್ಕಾರ ಎಂದು ಕೂಗಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ದೀಪಾವಳಿಗೂ ಮುಂಚೆ ಎಲ್ಲಾ ರೈತರಿಗೆ ಪರಿಹಾರಧನ ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಆದರೆ, ಜಿಲ್ಲೆಯ ನಾಲ್ಕು ತಾಲ್ಲೂಕುಗಳ ರೈತರಿಗೆ ಇದುವರೆಗೆ ಅತಿವೃಷ್ಟಿ ಪರಿಹಾರ ನೀಡಿಲ್ಲ ಎಂದರು.

ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಉದ್ದು, ಹೆಸರು, ಸೋಯಾ, ಹತ್ತಿ, ಕಬ್ಬು ಹಾಳಾಗಿದೆ. ಮದುವೆಗೆ ಹಣವಿಲ್ಲ. ಕುರ್ಚಿ ಕಿತ್ತಾಟದಲ್ಲಿ ರೆಸಾರ್ಟ್‌ ರಾಜಕೀಯ ಮಾಡುತ್ತಿದ್ದಾರೆ. ರೈತರು ಹೇಗಿದ್ದಾರೆ ಎನ್ನುವುದು ಅವರಿಗೆ ಬೇಕಿಲ್ಲ. ಈ ಸರ್ಕಾರದಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ.

ಇದುವರೆಗೆ ರೈತರಿಗೆ ಕೊಟ್ಟ ಪರಿಹಾರವೆಲ್ಲ ಕೇಂದ್ರ ಸರ್ಕಾರದ್ದು. ರಾಜ್ಯ ಸರ್ಕಾರದ ಹಣ ಇದುವರೆಗೆ ಕೊಟ್ಟಿಲ್ಲ. ತಾಂತ್ರಿಕ ದೋಷ ಎಂದು ಹೇಳುತ್ತಿದ್ದಾರೆ. ಅಂದೆಂತಹ ದೋಷ ಎಂಬುದನ್ನು ತಿಳಿಸಬೇಕು. ಕಿಸಾನ್‌ ಸಮ್ಮಾನ್‌ ಯಜನೆಯಡಿ ಕೇಂದ್ರ ಸರ್ಕಾರ ದೇಶದ ಎಲ್ಲಾ ರೈತರಿಗೆ ಒಂದೇ ಸಲ ಹಣ ಜಮೆ ಮಾಡುತ್ತದೆ. ಇವರಿಗೇಕೆ ಆಗುತ್ತಿಲ್ಲ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರದಿಂದ ₹4 ಸಾವಿರ ಹೆಚ್ಚುವರಿ ಕೊಡುತ್ತಿದ್ದರು. ಕಾಂಗ್ರೆಸ್‌ ಸರ್ಕಾರ ಕೊಡುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಮಾತನಾಡಿ, ಸಚಿವ ಈಶ್ವರ ಬಿ. ಖಂಡ್ರೆ ಅವರು ಕೊಟ್ಟ ಆಶ್ವಾಸನೆ ಸುಳ್ಳಾಗಿದೆ. ಸುಳ್ಳು ಭರವಸೆ ಕೊಡುವುದರಲ್ಲಿ, ರೈತರಿಗೆ ಮೋಸ ಮಾಡುವುದರಲ್ಲಿ ಅವರು ನಿಸ್ಸೀಮರು. ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕೆಂದು ರೈತರು ನಗರದಲ್ಲಿ ಒಂದು ವಾರ ಅಹೋರಾತ್ರಿ ಧರಣಿ ನಡೆಸಿದ್ದರು. ಬಿಜೆಪಿ ಸಹ ಅದನ್ನು ಬೆಂಬಲಿಸಿತ್ತು. ಇದರಿಂದ ಎಚ್ಚೆತ್ತು ಸಚಿವರು ಭಾರಿ ಪೊಲೀಸರೊಂದಿಗೆ ಧರಣಿ ಸ್ಥಳಕ್ಕೆ ತೆರಳಿದ್ದರು. ಇದು ಸರಿನಾ? ಬಿಜೆಪಿಯವರಾದ ನಾವು ರೈತರಿಗೆ ಬೆಂಬಲ ಕೊಡುವುದು ತಪ್ಪಾ ಎಂದು ಕೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ರೆಡ್ಡಿ, ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್‌, ಶಶಿಧರ ಹೊಸಳ್ಳಿ, ಅಶೋಕ ಹೊಕ್ರಾಣಿ, ಜಗನ್ನಾಥ ಜಮಾದಾರ, ಗುರುನಾಥ ಜ್ಯಾಂತಿಕರ್‌, ಬಸವರಾಜ ಪವಾರ, ವೀರು ದಿಗ್ವಾಲ್‌ ಮತ್ತಿತರರು ಪಾಲ್ಗೊಂಡಿದ್ದರು.

ಪರಿಹಾರ ವಿತರಣೆಯಲ್ಲಿ ರೈತರ ನಡುವೆ ತಾರತಮ್ಯ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಏನು ಸಿಗುತ್ತದೆ. ಇದು ಎಷ್ಟರಮಟ್ಟಿಗೆ ಸರಿ?
ಡಾ. ಶೈಲೇಂದ್ರ ಕೆ. ಬೆಲ್ದಾಳೆ ಶಾಸಕ
ಉಸ್ತುವಾರಿ ಸಚಿವರಿಗೆ ರೈತರಿಗೆ ನ್ಯಾಯ ಕೊಡಿಸುವ ಯೋಗ್ಯತೆ ಇಲ್ಲ. ಇಷ್ಟವಾದ ರೈತರಿಗೆ ಮಾತ್ರ ಪರಿಹಾರ ಕೊಡಿಸಿದ್ದಾರೆ. ನಾಚಿಕೆ ಆಗಬೇಕು.
ಭಗವಂತ ಖೂಬಾ ಕೇಂದ್ರದ ಮಾಜಿಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.