ADVERTISEMENT

ಬೀದರ್: ಚಂದಾ ಹಣದಿಂದ ರಸ್ತೆ ನಿರ್ಮಿಸಿಕೊಂಡ ರೈತರು

ನೆರವಿಗೆ ಬಾರದ ನಮ್ಮ ಹೊಲ ನಮ್ಮ ರಸ್ತೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:26 IST
Last Updated 23 ಫೆಬ್ರುವರಿ 2026, 7:26 IST
ಔರಾದ್ ತಾಲ್ಲೂಕಿನ ತೇಗಂಪೂರ ರೈತರು ತಮ್ಮ ಹೊಲಕ್ಕೆ ಹೋಗಿ ಬರಲು ಕಚ್ಚಾ ರಸ್ತೆ ನಿರ್ಮಿಸಿಕೊಳ್ಳುತ್ತಿರುವುದು
ಔರಾದ್ ತಾಲ್ಲೂಕಿನ ತೇಗಂಪೂರ ರೈತರು ತಮ್ಮ ಹೊಲಕ್ಕೆ ಹೋಗಿ ಬರಲು ಕಚ್ಚಾ ರಸ್ತೆ ನಿರ್ಮಿಸಿಕೊಳ್ಳುತ್ತಿರುವುದು   

ಔರಾದ್: ತಾಲ್ಲೂಕಿನ ತೇಗಂಪುರ ರೈತರು ತಮ್ಮ ಹೊಲಗಳಿಗೆ ತೆರಳಲು, ‘ನಮ್ಮ ಹೊಲ, ನಮ್ಮ ರಸ್ತೆ’ ಯೋಜನೆ ನೆರವಿಗೆ ಬರಲಿಲ್ಲ. ಹೀಗಾಗಿ ರೈತರು ತಾವೇ ಸೇರಿಕೊಂಡು, ತಮ್ಮ ಹೊಲಗಳಿಗೆ ಹೋಗಿ ಬರಲು ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅರ್ಧ ರಸ್ತೆ ನಿರ್ಮಿಸಿಕೊಂಡಿದ್ದು, ಇನ್ನರ್ಧ ರಸ್ತೆ ಕೆಲಸ ಚಾಲನೆಯಲ್ಲಿದೆ.

ಸುಮಾರು 80ಕ್ಕೂ ಹೆಚ್ಚು ರೈತರು ತಮ್ಮ ಹೊಲಗಳಿಗೆ ಹೋಗಿ ಬರಲು ಹಾಗೂ ತಾವು ಬೆಳೆಸಿದ ಕೃಷಿ ಉತ್ಪನ್ನ ಸಾಗಿಸಲು ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಂದಾ ಸಂಗ್ರಹಿಸಿ, ಕಚ್ಚಾ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ. ಸುಮಾರು 1 ಕಿ.ಮೀ. ಕಚ್ಚಾ ರಸ್ತೆ ನಿರ್ಮಿಸಲು ಅಗತ್ಯವಿರುವ ಮರಬ್ ತಂದು ಹಾಕಿದ್ದಾರೆ. ಇದಕ್ಕಾಗಿ ಸದ್ಯ ₹3 ಲಕ್ಷ ಚಂದಾ ಮಾಡಿದ್ದಾರೆ. ಕೆಲ ರೈತರು ತಮ್ಮಲ್ಲಿರುವ ಟ್ರ‍್ಯಾಕ್ಟರ್ ರಸ್ತೆ ಕೆಲಸಕ್ಕೆ ಬಳಸಿಕೊಳ್ಳಲು ಉಚಿತವಾಗಿ ನೀಡಿದ್ದಾರೆ.

ಈ ರಸ್ತೆ ನಿರ್ಮಿಸಲು ರೈತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಮೊದಲೇ ಇಲ್ಲಿ ಕಾಲು ದಾರಿಯಿದೆ. ಈಗ 12 ಅಡಿಯಷ್ಟು ಅಗಲ ಪ್ರದೇಶದಲ್ಲಿ ಕಲ್ಲು ಮುಳ್ಳು ತೆರವುಗೊಳಿಸಲಾಗಿದೆ. ಮರಬ್ ಹಾಕುವ ಕೆಲಸ ನಡೆಸಿದ್ದು, ವಾರದಲ್ಲಿ ಕಚ್ಚಾ ರಸ್ತೆ ಆಗಲಿದೆ ಎಂದು ತೇಗಂಪುರ ರೈತ ಶಿವಕಾಂತ ಮಜಗೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಸುಮಾರು 200 ಎಕರೆ ಪ್ರದೇಶಕ್ಕೆ ಹೋಗುವ ರೈತರಿಗೆ ದಾರಿಯಿಲ್ಲ. ಮಳೆಗಾಲದಲ್ಲಿ ಹೊಲಕ್ಕೆ ಹೋಗಲು ಹರಸಹಾಸ ಪಡೆಬೇಕಾಗುತ್ತದೆ. ಊರಲ್ಲಿ ಯಾರಾದರೂ ನಿಧನರಾದರೆ ಅಷ್ಟು ದೂರ ಶವ ಸಾಗಿಸಲು ರೈತರು, ಸಂಕಟ ಪಡುವುದನ್ನು ನಾನು ಕಣ್ಣಾರೇ ನೋಡಿದ್ದೇನೆ. ಈ ಕಾರಣಕ್ಕಾಗಿಯೇ ಚಂದಾ ಸಂಗ್ರಹಿಸಿ, ಕಚ್ಚಾ ರಸ್ತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಶರಣಪ್ಪ ಚಿಟ್ಮೆ ಹೇಳಿದರು. 

ನಾಲ್ಕೈದು ವರ್ಷಗಳಿಂದ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ರಸ್ತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಚಂದಾ ವಸೂಲಿ ಮಾಡಿ ರಸ್ತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈಗ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಫಾರ್ಮೇಷನ್ ರಸ್ತೆ ಮಾಡಲು ಅವಕಾಶವಿಲ್ಲ. ಉದ್ಯೋಗ ಖಾತರಿಯಲ್ಲಿ ಮಾಡಬಹುದಾಗಿದೆ. ಪಿಡಿಒಗೆ ಹೇಳಿ ತೇಗಂಪೂರದಲ್ಲಿ ರೈತರಿಗೆ ಫಾರ್ಮೇಷನ್ ರಸ್ತೆ ಮಾಡಿ ಕೊಡುತ್ತೇವೆ.
– ಕಿರಣ ಪಾಟೀಲ, ಇಒ ತಾ.ಪಂ ಔರಾದ್
ನಾವು ನಾಲ್ಕು ವರ್ಷಗಳಿಂದ ಫಾರ್ಮೇಷನ್ ರಸ್ತೆ ಮಾಡಿಕೊಡಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
– ಶರಣಪ್ಪ ಚಿಟ್ಮೆ , ತೇಗಂಪೂರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.