ಔರಾದ್ (ಬೀದರ್ ಜಿಲ್ಲೆ): ಭಾರಿ ಮಳೆಯಿಂದ ಹಾನಿಗೊಳಗಾದ ತಾಲ್ಲೂಕಿನ ಬಾವಲಗಾಂವ್, ಭಂಡಾರಕುಮಟಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಸೋಮವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ಬದೋಲೆ ಭೇಟಿ ನೀಡಿ ಪರಿಶೀಲಿಸಿದರು.
ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಬೊಂತಿ ಬಳಿಯ ಸಣ್ಣ ನೀರಾವರಿ ಇಲಾಖೆ ಕೆರೆ ಒಡೆದು ಸುತ್ತಲಿನ ಅನೇಕ ಗ್ರಾಮಗಳ ಹೊಲಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ಈ ಭಾಗಲ್ಲಿ ಸಂಚಾರ ಕಡಿತವಾಗಿದೆ. ಬಾವಲಗಾಂವ್ ಹಾಗೂ ಭಂಡಾರಕುಮಟಾ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಜನರಿಗೆ ಎಚ್ಚರ ವಹಿಸಲು ತಿಳಿಸಲಾಗಿದೆ. ಈ ಎರಡು ಗ್ರಾಮದ ಹೊರ ವಲಯದ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಳೆ ಹೀಗೆ ಮುಂದುವರೆದರೆ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ತಹಶೀಲ್ದಾರ್ ಮಹೇಶ ಪಾಟೀಲ್ ತಿಳಿಸಿದ್ದಾರೆ.
ಭಾರಿ ಮಳೆಯಿಂದ ಒಡೆದ ಬೊಂತಿ ಕೆರೆ ಹಾಗೂ ಸುತ್ತಲಿನ ಪ್ರದೇಶ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಕೆರೆ ಸುತ್ತಲಿನ ಪ್ರದೇಶದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಹಾಗೂ ತಮ್ಮ ಜಾನುರುಗಳು ಸುರಕ್ಷತೆ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು. ಸಹಾಯಕ ಆಯುಕ್ತ ಶಕೀಲ್ ಮೊಹಮ್ಮದ್, ಸಿಪಿಐ ರಘುವೀರಸಿಂಗ್ ಠಾಕೂರ್ ಜಿಲ್ಲಾಧಿಕಾರಿಗ ಜತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.