ADVERTISEMENT

ಅತಿವೃಷ್ಟಿ; ಸಿಎಂ ₹50 ಕೋಟಿ ಅನುದಾನ ನೀಡಿದ್ದಾರೆ: ಸಚಿವ ರಹೀಂ ಖಾನ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 10:48 IST
Last Updated 31 ಆಗಸ್ಟ್ 2025, 10:48 IST
   

ಬೀದರ್‌: ಪ್ರವಾಹದಿಂದ ಹಾನಿಗೀಡಾದವರಿಗೆ ಪರಿಹಾರ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತತ್‌ಕ್ಷಣದ ಪರಿಹಾರವಾಗಿ ₹50 ಕೋಟಿ ಅನುದಾನ ನೀಡಿದ್ದಾರೆ. ಇನ್ನೂ ₹100 ಕೋಟಿ ಹೆಚ್ಚುವರಿ ಪರಿಹಾರ ಮಂಜೂರು ಮಾಡಲು ಮನವಿ ಮಾಡಲಾಗಿದೆ ಎಂದು ಪೌರಾಡಳಿತ ಮತ್ತು ಹಜ್‌ ಖಾತೆ ಸಚಿವ ರಹೀಂ ಖಾನ್‌ ತಿಳಿಸಿದರು.

ತಾಲ್ಲೂಕಿನ ಪ್ರವಾಹ ಪೀಡಿತ ಸಂಗನಳ್ಳಿ, ಇಸ್ಲಾಂಪೂರ, ಇಮಾಮ್‌ಬಾದ್, ಮಾಲೆಗಾಂವ್, ಕಪಲಾಪೂರ, ಅಲಮಾಸಪುರ, ಜಾಂಪಾಡ್‌, ಅಲ್ಲಾಪೂರ ಹಾಗೂ ನೇಮತಾಬಾದ್‌ ಗ್ರಾಮಗಳಿಗೆ ಭಾನುವಾರ ಭೇಟಿ ಕೊಟ್ಟು ಬೆಳೆ ಹಾನಿ ಪರಿಶೀಲಿಸಿ, ರೈತರಿಗೆ ಪರಿಹಾರದ ಭರವಸೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. 

ಅಲಿಯಂಬರ್‌ ಗ್ರಾಮದಲ್ಲಿ ಹಾನಿಗೊಳಗಾದ ಸೇತುವೆಯ ದುರಸ್ತಿಗೆ ₹5 ಕೋಟಿ ಬಿಡುಗಡೆ ಮಾಡಲಾಗುವುದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾನಿಗೊಳಗಾದ ರಸ್ತೆ, ಸೇತುವೆ ದುರಸ್ತಿ ಕಾರ್ಯ ಶೀಘ್ರವೇ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ADVERTISEMENT

ಕಳೆದ ಮೂರು ದಿನಗಳಿಂದ ಸತತವಾಗಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಪ್ಟೆಂಬರ್ 6ರಿಂದ ಮತ್ತೆ ಮಳೆ ಪ್ರವಾಹ ಪರಿಶೀಲನಾ ಕಾರ್ಯ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಭಾರಿ ಮಳೆಯಿಂದಾಗಿ ರೈತರ ಹೊಲಗಳಲ್ಲಿ ಬೆಳೆದಿದ್ದ ಹೆಸರು, ಉದ್ದು ಸೋಯಾಬೀನ್, ತೊಗರಿ ಸಂಪೂರ್ಣವಾಗಿ ನಾಶವಾಗಿವೆ. ಹಲವು ಕಡೆಗಳಲ್ಲಿ ಅನೇಕ ಮನೆಗಳು ಕುಸಿದಿವೆ. ಪ್ರತಿಯೊಂದು ವಿಪತ್ತು ಮತ್ತು ಹಾನಿಯ ವರದಿ ಮಾಡಲು, ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಲು ಜಂಟಿ ಇಲಾಖಾ ಸಮೀಕ್ಷೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬೆಳೆ ಹಾನಿ ಮತ್ತು ಮನೆ ಹಾನಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿಯಲ್ಲಿ ತಕ್ಷಣ ಪರಿಹಾರ ನೀಡಲಾಗುವುದು ಎಂದರು.

ಬೀದರ್‌ ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್, ಬೀದರ್‌ ತಹಸಿಲ್ದಾರ್ ರವೀಂದ್ರ ದಾಮಾ, ಕೃಷಿ ಇಲಾಖೆ ಉಪನಿರ್ದೇಶಕ ಇಕ್ಬಾಲ್ ಅನ್ಸಾರಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.