ಬೀದರ್‌ನ ಬ್ರಿಮ್ಸ್ ನೆಲಮಹಡಿ ಹಾಗೂ ಲಿಫ್ಟ್ ಇರುವ ಜಾಗದಲ್ಲಿ ಮಳೆ ನೀರು ಸಂಗ್ರಹಗೊಂಡಿರುವುದು
ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರವೂ ಜಿಟಿಜಿಟಿ ಮಳೆಯಾಯಿತು.
ದಿನವಿಡೀ ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು. ಬಿಟ್ಟು ಬಿಟ್ಟು ಹಗಲೆಲ್ಲಾ ಜಿಟಿಜಿಟಿ ಮಳೆ ಸುರಿಯಿತು.
ಮಂಗಳವಾರ ಸಂಜೆ ಕೆಲಹೊತ್ತು ಬಿರುಸಿನ ಮಳೆಯಾಯಿತು. ರಾತ್ರಿ ಕೂಡ ಬಿಟ್ಟು ಬಿಟ್ಟು ಮಳೆಯಾಯಿತು. ಹೀಗೆ ಸತತ ಮಳೆ ಸುರಿಯುತ್ತಿರುವ ಕಾರಣ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿದೆ.
ನಗರದ ಬ್ರಿಮ್ಸ್ ನೆಲಮಹಡಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ಮೋಟಾರ್‌ಗಳ ಸಹಾಯದಿಂದ ಸತತವಾಗಿ ನೀರು ಹೊರಹಾಕಲಾಗುತ್ತಿದೆ. ಆದರೆ, ಅಲ್ಲಿರುವ ಬಾವಿಯಿಂದ ನೀರು ಹೊರಹೊಮ್ಮುತ್ತಿದೆ. ಜೊತೆಗೆ ಮಳೆ ನೀರು ಕೂಡ ಸಂಗ್ರಹಗೊಂಡು ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ನೆಲಮಹಡಿಯಲ್ಲಿ ಜನ ಹಾಗೂ ಬ್ರಿಮ್ಸ್ ಸಿಬ್ಬಂದಿಯ ಓಡಾಟ ನಿರ್ಬಂಧಿಸಲಾಗಿದೆ.
ಜಿಲ್ಲೆಯ ಬೀದರ್, ಕಮಲನಗರ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್‌ನ ಕೆಲವು ಕಡೆಗಳಲ್ಲಿ ಮಳೆಯಾಗಿರುವುದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಅಲ್ಲಿನ ಹಲವು ಜಲಾಶಯಗಳಿಂದ ನೀರು ಹರಿಸಲಾಗುತ್ತಿದೆ. ಮಾಂಜ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕಾರಂಜಾ ಜಲಾಶಯದಿಂದಲೂ ಮೂರನೇ ದಿನವಾದ ಬುಧವಾರವೂ ನದಿಗೆ ನೀರು ಹರಿಸಲಾಯಿತು.
ಇನ್ನು, ಮೇಘಸ್ಫೋಟದಿಂದ ಸಂಕಷ್ಟಕ್ಕೀಡಾಗಿರುವ ಕಮಲನಗರ ಹಾಗೂ ಔರಾದ್ ತಾಲ್ಲೂಕು ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ.
ಮೂರು ದಿನಗಳಲ್ಲಿ 138 ಮನೆಗಳಿಗೆ ಹಾನಿ
ಕಳೆದ ಮೂರು ದಿನಗಳ ಅವಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 138 ಮನೆಗಳಿಗೆ ಹಾನಿ ಉಂಟಾಗಿದೆ.
ಭಾಲ್ಕಿಯಲ್ಲಿ ಅತಿ ಹೆಚ್ಚು 35 ಮನೆಗಳು ಬಿದ್ದಿವೆ. ಕಮಲನಗರ ಹಾಗೂ ಬಸವಕಲ್ಯಾಣದಲ್ಲಿ ತಲಾ 22 ಮನೆಗಳು, ಔರಾದ್‌ನಲ್ಲಿ 20, ಬೀದರ್ ಹಾಗೂ ಚಿಟಗುಪ್ಪದಲ್ಲಿ ತಲಾ 12 ಮನೆಗಳು ಭಾಗಶಃ ಬಿದ್ದಿವೆ. ಹುಲಸೂರಿನಲ್ಲಿ 8, ಹುಮನಾಬಾದ್‌ನಲ್ಲಿ 7 ಮನೆಗಳಿಗೆ ಹಾನಿಯಾಗಿದೆ.
ಉದ್ದು, ಹೆಸರು ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 7,775 ಹೆಕ್ಟೇರ್ ಬೆಳೆ ಹಾಳಾಗಿದೆ. 21 ಜಾನುವಾರುಗಳು ಸಾವನ್ನಪ್ಪಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.