ADVERTISEMENT

ಬೀದರ್‌: ಮಳೆಯಿಂದ 3 ದಿನದಲ್ಲಿ 157 ಮನೆಗೆ ಹಾನಿ; 121 ಸೇತುವೆಗಳಿಗೆ ಹಾನಿ

ವಾರದಲ್ಲಿ ಶೇ 199 ಹೆಚ್ಚುವರಿ ಮಳೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 13:14 IST
Last Updated 28 ಸೆಪ್ಟೆಂಬರ್ 2025, 13:14 IST
   

ಬೀದರ್‌: ‘ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 642 ಮಿಮೀ ಮಳೆ ಆಗಬೇಕು. ಆದರೆ, 749 ಮಿಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ 17ರಷ್ಟು ಹೆಚ್ಚುವರಿಯಾಗಿದೆ. ಕಳೆದ ಏಳು ದಿನಗಳಲ್ಲಿ 122 ಮಿಮೀ ಮಳೆಯಾಗಿದ್ದು, ಶೇ 199ರಷ್ಟು ಹೆಚ್ಚುವರಿ’ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ 251 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ 56ರಷ್ಟು ಜಾಸ್ತಿ. ನೆರೆಯ ಮಾಹಾರಾಷ್ಟ್ರ ಧನೆಗಾಂವ್‌ ಜಲಾಶಯದಿಂದ ಹೆಚ್ಚುವರಿಯಾಗಿ ಮಾಂಜ್ರಾ ನದಿಗೆ ನೀರು ಹರಿಸುತ್ತಿರುವುದರಿಂದ ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಭಾನುವಾರ ಮಾಹಿತಿ ಹಂಚಿಕೊಂಡಿದೆ.

ಜಿಲ್ಲೆಯಾದ್ಯಂತ ಎಂಟು ಜಾನುವಾರುಗಳು ಮೃತಪಟ್ಟರೆ, 157 ಮನೆಗಳಿಗೆ ಹಾನಿ ಉಂಟಾಗಿದೆ. ವಿವಿಧ ಕಡೆಗಳಲ್ಲಿ 100 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ದವಸ–ಧಾನ್ಯಗಳು, ದಿನಬಳಕೆಯ ವಸ್ತುಗಳು ಹಾಳಾಗಿವೆ. ಜಂಟಿ ಸಮೀಕ್ಷೆ ಮುಂದುವರೆದಿದ್ದು, ಆಗಸ್ಟ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ 94272.47 ಹೆಕ್ಟೇರ್‌ ಬೆಳೆ ಹಾಳಾಗಿದೆ. ಮೊದಲ ಹಂತದ ಬೆಳೆ ಹಾನಿ ಜಂಟಿ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲು ಪರಿಹಾರ ತಂತ್ರಾಂಶ (Portal) ಓಪನ್‌ ಮಾಡಲು ಅನುಮತಿ ಕೋರಲಾಗಿದೆ ಎಂದು ತಿಳಿಸಿದೆ.

ADVERTISEMENT

ಹುಮನಾಬಾದ್‌ ತಾಲ್ಲೂಕಿನ ಘಾಟಬೋರಾಳ ಗ್ರಾಮದ 12 ಮನೆಗಳಲ್ಲಿ ನೀರು ನುಗ್ಗಿರುವುದರಿಂದ ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಮತ್ತು ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ ಗ್ರಾಮದ 8 ಮನೆಗಳಲ್ಲಿ ನೀರು ನುಗ್ಗಿರುವುದರಿಂದ ಸದರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸದರಿ ಕೇಂದ್ರಗಳಲ್ಲಿ ಒಟ್ಟು 266 ಗ್ರಾಮಸ್ಥರನ್ನು ಇರಿಸಲಾಗಿದೆ. ಇದರಲ್ಲಿ 126 ಪುರುಷರು, 84 ಮಹಿಳೆಯರು, 56 ಮಕ್ಕಳು ಸೇರಿದ್ದಾರೆ ಎಂದು ತಿಳಿಸಿದೆ.

ಭಾರಿ ಮಳೆಗೆ ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು 27 ಸೇತುವೆಗಳ ಮೇಲಿಂದ ನೀರು ಹರಿಯುತ್ತಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೀದರ್‌ ತಾಲ್ಲೂಕಿನ 1, ಕಮಲನಗರದ–1, ಭಾಲ್ಕಿ–16, ಬಸವಕಲ್ಯಾಣ–3, ಹುಮನಾಬಾದ್‌–3, ಚಿಟಗುಪ್ಪ ಹಾಗೂ ಹುಲಸೂರ ತಲಾ 1 ಸೇರಿದೆ. ಜಿಲ್ಲೆಯಲ್ಲಿ ಒಟ್ಟು 179.60 ಕಿ.ಮೀ ರಸ್ತೆ ಹಾಳಾಗಿದೆ. ಒಟ್ಟು 121 ಸೇತುವೆಗಳಿಗೆ ಹಾನಿಯಾಗಿದೆ ಎಂದು ವಿವರಿಸಿದೆ.

ಜಿಲ್ಲೆಯಲ್ಲಿ ಒಟ್ಟು 420 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. 246 ವಿದ್ಯುತ್‌ ಕಂಬ, 36 ಟ್ರಾನ್ಸ್‌ ಫಾರ್ಮರ್‌ಗಳು, 30.68 ಕಿ.ಮೀ ವಿದ್ಯುತ್‌ ತಂತಿಗೆ ಹಾನಿಯಾಗಿದೆ. 24 ಸಣ್ಣ ನೀರಾವರಿ ಇಲಾಖೆ ಕೆರೆಗಳು, 241 ಅಂಗನವಾಡಿ ಕಟ್ಟಡಗಳು, 17 ಕುಡಿಯುವ ನೀರಿನ ಯೋಜನೆ, 24 ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.