ಬೀದರ್: ಹಗಲು–ರಾತ್ರಿಯೆನ್ನದೆ ಬಿಟ್ಟೂ ಬಿಡದೇ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಅಕ್ಷರಶಃ ಜನರನ್ನು ಕಂಗೆಡಿಸಿದೆ.
ಸ್ವಲ್ಪವೂ ಮಳೆ ಬಿಡುವು ಕೊಡದ ಕಾರಣ ಜನರಿಗೆ ‘ಗೃಹ ಬಂಧನ’ವಾದಂತಾಗಿದೆ. ಜನರ ದೈನಂದಿನ ಕೆಲಸಗಳಿಗೆ ತೊಡಕಾಗಿದೆ. ತೀರ ಅಗತ್ಯವಿದ್ದರಷ್ಟೇ ಜನ ಹೊರಗೆ ಓಡಾಡುತ್ತಿದ್ದಾರೆ. ಅದು ಕೂಡ ಕೊಡೆಗಳನ್ನು ಹಿಡಿದುಕೊಂಡು. ಪ್ರಮುಖ ರಸ್ತೆಗಳಲ್ಲಿಯೂ ಜನದಟ್ಟಣೆ ಅಷ್ಟಕಷ್ಟೇ ಇತ್ತು.
ಉದ್ಯಾನ, ಆಟದ ಮೈದಾನ, ಸರ್ಕಾರಿ ಕಚೇರಿಗಳು, ಪ್ರಮುಖ ರಸ್ತೆಗಳಲೆಲ್ಲಾ ನೀರು ಸಂಗ್ರಹಗೊಂಡಿದ್ದು, ಜನ ಓಡಾಡಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸತತ ಮಳೆಗೆ ಜಿಲ್ಲೆಯ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಕಾರಂಜಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಚುಳಕಿನಾಲಾ, ಮುಲ್ಲಾಮಾರಿ ಜಲಾಶಯಗಳು ತುಂಬಿವೆ. ಮಹಾರಾಷ್ಟ್ರದಲ್ಲೂ ವ್ಯಾಪಕ ಮಳೆಯಾಗುತ್ತಿರುವ ಕಾರಣ ಮಾಂಜ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನೆರೆಯ ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಕಾರಂಜಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಮಳೆಗೆ ನಗರದ ಬಹಮನಿ ಕೋಟೆಯ ಗೋಡೆ ಕುಸಿದು ಬಿದ್ದಿದೆ. ಕಂದಕ ಭಾಗದ ಗೋಡೆ ಬಿದ್ದಿರುವುದರಿಂದ ಯಾರಿಗೂ ಯಾವುದೇ ರೀತಿಯ ಅಪಾಯ ಆಗಿಲ್ಲ.
ಜಿಲ್ಲೆಯ ಔರಾದ್, ಕಮಲನಗರ ಹಾಗೂ ಭಾಲ್ಕಿ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಈ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲೇ 20ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ನೀರು ಹರಿಯುತ್ತಿರುವ ಕಾರಣ ಸದ್ಯದ ಮಟ್ಟಿಗೆ ಸೇತುವೆ ದುರಸ್ತಿಯೂ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಉದ್ದು, ಹೆಸರು ಬೆಳೆ ಈಗಾಗಲೇ ನೆಲಕಚ್ಚಿದ್ದು, ಸೋಯಾ ಅವರೆ, ತೊಗರಿ ಬೆಳೆಗಳಿಗೂ ಕಂಟಕ ಎದುರಾಗಿದೆ. ಅನೇಕ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಕೆರೆಯಂತೆ ಭಾಸವಾಗುತ್ತಿದೆ. ಇನ್ನು, ಹಳ್ಳಕ್ಕೆ ಹೊಂದಿಕೊಂಡಿರುವ ಜಮೀನುಗಳ ಬೆಳೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.
ಮಳೆಯಿಂದಾಗಿ ಗುರುವಾರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಶುಕ್ರವಾರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ನೆರೆಯ ತೆಲಂಗಾಣದಲ್ಲಿ ಇನ್ನೂ ಎರಡ್ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
‘ಬೀದರ್ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ನದಿ, ಹಳ್ಳ, ಕೆರೆಗಳನ್ನು ದಾಟಬಾರದು. ಜಾನುವಾರುಗಳನ್ನು ನದಿ ದಂಡೆ ಅಥವಾ ಹಳ್ಳದ ತಟಕ್ಕೆ ಬಿಡಬಾರದು. ಮಕ್ಕಳು, ವಯೋವೃದ್ಧರ ಸುರಕ್ಷತೆಗಾಗಿ ವಿಶೇಷ ಗಮನ ಹರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಔರಾದ್ ಕಮಲನಗರದಲ್ಲಿ ಹೆಚ್ಚು ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಔರಾದ್ ಮತ್ತು ಕಮಲನಗರ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಔರಾದ್‌ನಲ್ಲಿ 11.3 ಸೆಂ.ಮೀ ಕಮಲನಗರದಲ್ಲಿ 10.3 ಸೆಂ.ಮೀ ಮಳೆ ಬಿದ್ದಿದೆ. ಭಾಲ್ಕಿಯಲ್ಲೂ ಉತ್ತಮ ರೀತಿಯಲ್ಲಿ ಮಳೆಯಾಗಿದ್ದು ಈ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲೇ ಹೆಚ್ಚಿನ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ‘ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಆದರೆ ಎಲ್ಲ ಅಧಿಕಾರಿಗಳ ಕಟ್ಟೆಚ್ಚರ ಪರಿಶ್ರಮದಿಂದ ಇದುವರೆಗೆ ಯಾವುದೇ ಜೀವ ಹಾನಿ ಉಂಟಾಗಿಲ್ಲ. ಜನ ಕೂಡ ಭಯ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರುವುದು ಸೂಕ್ತ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರು ಡಿಸಿ ಓಡಾಟ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ಜಿಲ್ಲೆಯ ಹಲವೆಡೆ ಮಳೆಯ ನಡುವೆಯೇ ಸುತ್ತಾಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಸಚಿವರು ಭಾಲ್ಕಿ ತಾಲ್ಲೂಕಿನ ಗೋಧಿ ಹಿಪ್ಪರ್ಗಾ ಲಖನ್‌ಗಾಂವ್ ಸೇತುವೆ ಹುಮನಾಬಾದ್ ರಸ್ತೆಯ ಸೇತುವೆ ಮೇಲೆ ನೀರು ಹರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಗುವ ಅನಾಹುತಗಳನ್ನು ತಪ್ಪಿಸಲು ತಕ್ಷಣ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಅತಿವೃಷ್ಟಿ ನಿರ್ವಹಿಸಲು ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಅನಿವಾರ್ಯ ಸಂದರ್ಭ ಹೊರತುಪಡಿಸಿ ರಜೆ ಪಡೆಯಬಾರದು. ಎಸ್‌ಡಿಆರ್‌ಎಫ್ ಎನ್‌ಡಿಆರ್‌ಎಫ್ ಸನ್ನದ್ಧಗೊಳಿಸಬೇಕು’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ಸೂಚನೆ ನೀಡಿದ್ದಾರೆ. ಅತಿವೃಷ್ಟಿ ಪ್ರದೇಶಗಳಿಗೆ ಸಂಬಂಧಪಟ್ಟ ಉಪವಿಭಾಗಾಧಿಕಾರಿ ಕಡ್ಡಾಯವಾಗಿ ಭೇಟಿ ನೀಡಬೇಕು. ಹೆಚ್ಚು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳನ್ನೊಳಗೊಂಡ ತಂಡವು ಖುದ್ದು ಮೊಕ್ಕಾಂ ಹುಡಬೇಕು. ಹವಾಮಾನ ಇಲಾಖೆ ಮುನ್ಸೂಚನೆ ಮಳೆ ದತ್ತಾಂಶವನ್ನಾಧರಿಸಿ ಪ್ರವಾಹದಿಂದ ಉಂಟಾಗಬಹುದಾದ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಶಿಲ್ಪಾ ಶರ್ಮಾ ಅವರು ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಬಿ) ಸಿಂದಬಂದಗಿ ಭಾಲ್ಕಿ ತಾಲ್ಲೂಕಿನ ಗೋಧಿ ಹಿಪ್ಪರ್ಗಾ ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿದರು. ಸಿಂದಬಂದಗಿ ಗ್ರಾಮದ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ ವಿಷಯ ತಿಳಿದು ಸ್ಥಳಕ್ಕೆ ಭೇಟಿ ಕೊಟ್ಟು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬೀದರ್–ಕಲಬುರಗಿ ರೈಲು ರದ್ದು
ಬೀದರ್: ಸತತ ಮಳೆಯ ಹಿನ್ನೆಲೆಯಲ್ಲಿ ಬೀದರ್–ಕಲಬುರಗಿ ನಡುವೆ ನಿತ್ಯ ಸಂಚರಿಸುವ ಡೆಮು ರೈಲು ಸಂಚಾರವನ್ನು ಶುಕ್ರವಾರ (ಆ.29) ರದ್ದುಗೊಳಿಸಲಾಗಿದೆ. ‘ಹವಾಮಾನ ವೈಪರೀತ್ಯದ ಕಾರಣದಿಂದ ಬೀದರ್–ಕಲಬುರಗಿ (ಗಾಡಿ ಸಂಖ್ಯೆ: 77631 77636 77633 77638) ಹಾಗೂ ಕಲಬುರಗಿ–ಬೀದರ್ (ಗಾಡಿ ಸಂಖ್ಯೆ: 7763277634 77635 77637 ) ನಡುವೆ ನಿತ್ಯ ಸಂಚರಿಸುವ ರೈಲಿನ ಸಂಚಾರ ರದ್ದುಪಡಿಸಲಾಗಿದೆ’ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಮಳೆಗೆ ಬೀದರ್ ಜಿಲ್ಲೆಯಾದ್ಯಂತ ಹಾಳಾದ ಬೆಳೆಗಳ ವಿವರ (ಹೆಕ್ಟೇರ್‌ಗಳಲ್ಲಿ) 2125; ಹೆಸರು 1043; ಉದ್ದು 3348; ತೊಗರಿ 5866; ಸೋಯಾ ಅವರೆ 60; ಹತ್ತಿ 12442; ಒಟ್ಟು ಬೀದರ್ ಜಿಲ್ಲೆಯಲ್ಲಿ ಆ. 27ರಿಂದ 28ರ ನಡುವೆ ಸುರಿದ ಮಳೆಯ ವಿವರ (ಸೆಂ.ಮೀ.ಗಳಲ್ಲಿ) ತಾಲ್ಲೂಕು ಹೆಸರು; ಪ್ರಮಾಣ ಬೀದರ್; 7 ಔರಾದ್; 11.3 ಕಮಲನಗರ; 10.3 ಭಾಲ್ಕಿ; 5.1 ಹುಮನಾಬಾದ್; 4.3 ಬಸವಕಲ್ಯಾಣ; 4.1 ಹುಲಸೂರ; 3.9 ಚಿಟಗುಪ್ಪ; 2.7 ಮಳೆಗೆ ಬೀದರ್ ಜಿಲ್ಲೆಯಲ್ಲಿ ಆಗಿರುವ ಹಾನಿ ಅಂಕಿ ಅಂಶ 227; ಮನೆಗಳು 12537; ಹೆಕ್ಟೇರ್ ಬೆಳೆ 28; ಜಾನುವಾರು ಸಾವು 06; ರಸ್ತೆಗಳು 06; ಎಂಐ ಟ್ಯಾಂಕ್ 10; ಸೇತುವೆ 151; ವಿದ್ಯುತ್ ಕಂಬಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.