ADVERTISEMENT

ಹುಲಸೂರ | ಹಾಳಾದ ರಸ್ತೆ: ಸವಾರರ ಪರದಾಟ

ಅಕ್ರಮವಾಗಿ ರಸ್ತೆ ಅಗೆಯುವವರ ವಿರುದ್ಧ ಕ್ರಮಕ್ಕೆ ವಾಹನಗಳ ಸವಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 5:00 IST
Last Updated 10 ಅಕ್ಟೋಬರ್ 2024, 5:00 IST
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಸಾಯಗಾಂವ ತಾಂಡಾದಿಂದ ಮೆಹಕರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ರೈತರು ತಮ್ಮ ಜಮೀನಿಗೆ ಪೈಪ್‌ಲೈನ್ ಅಳವಡಿಸಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಗೆದಿರುವುದರಿಂದ ರಸ್ತೆಯಲ್ಲಿ ಕಂದಕ ಬಿದ್ದಿರುವುದು
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಸಾಯಗಾಂವ ತಾಂಡಾದಿಂದ ಮೆಹಕರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ರೈತರು ತಮ್ಮ ಜಮೀನಿಗೆ ಪೈಪ್‌ಲೈನ್ ಅಳವಡಿಸಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಗೆದಿರುವುದರಿಂದ ರಸ್ತೆಯಲ್ಲಿ ಕಂದಕ ಬಿದ್ದಿರುವುದು   

ಹುಲಸೂರ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕೆಲವು ರೈತರು ತಮ್ಮ ಗದ್ದೆಗಳಿಗೆ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ಪಡೆಯಲು ರಸ್ತೆ ಅಗೆದಿದ್ದು, ಇದರಂದ ವಾಹನಗಳ ಸಂಚಾರ ತೊಂದರೆಯಾಗುತ್ತಿದೆ ಎಂದು ವಾಹನ ಸವಾರರಿಗೆ ದೂರಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬೇಲೂರ ಗ್ರಾಮದ ಬಸವಕಲ್ಯಾಣ- ಹುಲಸೂರ ಮುಖ್ಯ ರಸ್ತೆಯ ಹತ್ತಿರ, ಕದಿರಾಬಾದ ಗ್ರಾಮದಿಂದ ಹೊನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹತ್ತಿರ, ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮದಿಂದ ಮೆಹಕರ ಗ್ರಾಮದ ರಸ್ತೆಯ ಮಧ್ಯ ಸೇರಿದಂತೆ ಇನ್ನಿತರ ಗ್ರಾಮಗಳ ರೈತರು ತಮ್ಮ ಹೊಲಗಳಿಗೆ ಕೆರೆ, ಜಲಾಶಯ, ನದಿಯಿಂದ ಪೈಪ್‌ಲೈನ್ ಹಾಕಲು ಜಿಲ್ಲಾ ಮುಖ್ಯ ರಸ್ತೆಯನ್ನು ಅಗೆದಿದ್ದಾರೆ. ಇದು ಕಾನೂನಿನ ವಿರುದ್ಧವಾದ ಕೆಲಸ ಎಂಬುದು ಸಾರ್ವಜನಿಕರ ಆರೋಪ.

ನಿಯಮ: ರಾಜ್ಯ, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮೀಣ ರಸ್ತೆಗಳನ್ನು ಅಗೆಯಬೇಕಾದರೆ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಕೊಡಬೇಕು. ಆಗ ಆ ಇಲಾಖೆಯವರು ಅದಕ್ಕೆ ತಗುಲುವ ವೆಚ್ಚವನ್ನು ಅಂದಾಜಿಸಿ, ಅರ್ಜಿದಾರರಿಗೆ ತಿಳಿಸುತ್ತಾರೆ. ಆಗ ಅರ್ಜಿದಾರರು ಅಂದಾಜು ವೆಚ್ಚ ಭರಿಸಿದ ಬಳಿಕ ರಸ್ತೆ ಅಗೆಯಲು ಇಲಾಖೆಯವರು ಅನುಮತಿ ಕೊಡುತ್ತಾರೆ. ನಂತರ ಇಲಾಖೆಯಿಂದ ಆ ರಸ್ತೆಯನ್ನು ರೈತರು ಭರಿಸಿದ ಹಣ ಬಳಸಿಕೊಂಡು ದುರಸ್ತಿ ಮಾಡುತ್ತಾರೆ.

ADVERTISEMENT

ಅನುಮತಿ ‍ಪಡೆಯೋದೇ ಇಲ್ಲ:‌ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೈತರು ರಸ್ತೆ ಅಗೆಯುವಾಗ ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯೋದೇ ಇಲ್ಲ. ರಾತ್ರೋರಾತ್ರಿ ಉತ್ತಮ ಡಾಂಬರ್‌ ರಸ್ತೆಯನ್ನು ಅಗೆದು ಪೈಪ್‌ಗಳನ್ನು ಹಾಕಿ ಒಣಮುರಂನಿಂದ ರಸ್ತೆಯನ್ನು ಮುಚ್ಚಿ ಬಿಡುತ್ತಾರೆ. ವಾಹನಗಳು ಸಂಚರಿಸಿದಾಗ ಒಣ ಮುರಂ ಗಾಳಿಗೆ ಹಾರಿ ರಸ್ತೆಯಲ್ಲಿ ಕಂದಕಗಳು ಬೀಳುತ್ತವೆ. ಇದರಿಂದಾಗಿ ದ್ವಿಚಕ್ರ ವಾಹನ ಚಾಲಕರು ನಿಯಂತ್ರಣ ತಪ್ಪಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಬಾಹಿರವಾಗಿ ರಸ್ತೆ ಅಗೆದು ಹಾಳು ಮಾಡುತ್ತಿರುವ ರೈತರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಲಾಖೆ ಅನುಮತಿ ಪಡೆಯದೇ ಎಲ್ಲೆಲ್ಲಿ ರಸ್ತೆಯನ್ನು ಅಗೆದು ಹಾಳು ಮಾಡಿದ್ದಾರೆ ಎಂಬುದರ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು
ಅಲ್ತಾಫ್‌ಮಿಯಾ ಎಇಇ ಲೋಕೋಪಯೋಗಿ ಇಲಾಖೆ ಭಾಲ್ಕಿ
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯಿಂದ ರೈತರು ರಸ್ತೆ ಅಗೆಯುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅಂಥವರ ಮೇಲೆ ಕ್ರಮಕೈಗೊಳ್ಳಬೇಕು
ಆನಂದ ಪಟ್ನೆ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.