ಭಾಲ್ಕಿ: ‘ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ದಲಿತ ಸಮುದಾಯದ ಸ್ಮಶಾನ ಭೂಮಿಗೆ ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಪಟ್ಟಾ ಭೂಮಿ ಖರೀದಿಗೆ ಜಮೀನು ಗುರುತಿಸಲಾಗಿದೆ. 24 ಗಂಟೆಗಳಲ್ಲಿ ಜಿಲ್ಲಾಧಿಕಾರಿ ಭೂಮಿ ಖರೀದಿ ಪ್ರಕ್ರಿಯೆ ಆರಂಭಿಸಿ ತಕ್ಷಣವೇ ಈ ಭೂಮಿಯನ್ನು ಸ್ಮಶಾನಕ್ಕಾಗಿ ಹದ್ದುಬಸ್ತು ಮಾಡಿ ಹಸ್ತಾಂತರ ಮಾಡಬೇಕು’ ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು,‘ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಇಲ್ಲವೆಂಬ ವಿಷಯ ಕೆಲ ತಿಂಗಳ ಹಿಂದೆ ತಿಳಿದ ಕೂಡಲೇ ತಹಶೀಲ್ದಾರ್‌ಗೆ ಸರ್ಕಾರಿ ಭೂಮಿ ಖರೀದಿಸಲು ಸೂಚನೆ ನೀಡಿದ್ದೆ, ಆ ಸಂದರ್ಭದಲ್ಲಿ ಸರ್ಕಾರಿ ಜಮೀನು ಇಲ್ಲದಿರುವುದು ಗಮನಕ್ಕೆ ಬಂದ ಬಳಿಕ ಪಟ್ಟಾ ಜಮೀನು ಖರೀದಿಗೆ ಸೂಚನೆ ನೀಡಿದರೂ ಜಮೀನು ಮಾರಾಟಕ್ಕೆ ಜನರು ಸಿದ್ಧರಿಲ್ಲ ಎಂಬ ವಿಷಯವನ್ನು ಅಧಿಕಾರಿಗಳು ತಿಳಿಸಿದ್ದರು’ ಎಂದ ರು.
ನಂತರ ಗ್ರಾಮದ ಮುಖಂಡ ಶಿವರಾಜ ಹಾಸನಕರ್ ಅವರಿಗೆ ಜಮೀನು ಖರೀದಿ ಜವಾಬ್ದಾರಿ ವಹಿಸಿದ ಕಾರಣ 2022ರ ಮಾರ್ಚ್ 8ರಂದು ಬಸವರಾಜ್ ಎಂಬುವವರು 2.37 ಎಕರೆ ಪಟ್ಟಾ ಭೂಮಿಯನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಮಾರಾಟ ಮಾಡಲು ಸಮ್ಮತಿಸಿರುತ್ತಾರೆ. ಈ ಪ್ರಸ್ತಾವ ತಹಶೀಲ್ದಾರ್‌ಗೆ ಸಲ್ಲಿಕೆಯಾಗಿದೆ. ಆದರೂ ಸರ್ಕಾರ ವಿಳಂಬ ಮಾಡುತ್ತಿದೆ. ಆ.16 ರಂದು ತಹಶೀಲ್ದಾರ್ ಅವರು ಡಿಸಿಗೆ ಪ್ರಸ್ತಾವ ಸಲ್ಲಿಸಿರುತ್ತಾರೆ. ಸರ್ಕಾರದ ಬಳಿ ಸ್ಮಶಾನ ಭೂಮಿ ಖರೀದಿಸಲೂ ಹಣ ಇಲ್ಲದಿದ್ದರೆ ಬಹಿರಂಗವಾಗಿ ಹೇಳಲಿ, ಶಾಸಕರಾಗಿ ತಾವು ಅಧಿವೇಶನದ ಬಳಿಕ ವೈಯಕ್ತಿಕ ದೇಣಿಗೆ ನೀಡಿ, ಜನರಿಂದ ದೇಣಿಗೆ ಸಂಗ್ರಹಿಸಿ ಭೂಮಿ ಖರೀದಿಸಿ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.