ADVERTISEMENT

ಬೀದರ್ | ಪಂಚಾಚಾರ್ಯ ಪುಣ್ಯಾಶ್ರಮದ ವಿಕಾಸಕ್ಕೆ ಕೈಜೋಡಿಸಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 12:17 IST
Last Updated 23 ಮಾರ್ಚ್ 2025, 12:17 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ಬೀದರ್‌ನ ಪಂಚಾಚಾರ್ಯ ಪುಣ್ಯಾಶ್ರಮಕ್ಕೆ ಭಾನುವಾರ ಭೇಟಿ ನೀಡಿದರು
ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ಬೀದರ್‌ನ ಪಂಚಾಚಾರ್ಯ ಪುಣ್ಯಾಶ್ರಮಕ್ಕೆ ಭಾನುವಾರ ಭೇಟಿ ನೀಡಿದರು   

ಬೀದರ್‌: ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರು ನಗರದ ಬೀದರ್‌–ಭಾಲ್ಕಿ ರಸ್ತೆಯಲ್ಲಿರುವ ಪಂಚಾಚಾರ್ಯ ಪುಣ್ಯಾಶ್ರಮಕ್ಕೆ ಭಾನುವಾರ ಭೇಟಿ ನೀಡಿ, ನಿರ್ಮಾಣ ಹಂತದ ಕಾಮಗಾರಿ ಪರಿಶೀಲಿಸಿದರು.

‘ತನು, ಮನ ಹಾಗೂ ಧನದಿಂದ ಶಕ್ತರಾಗಿರುವವರು ಇಲ್ಲಿಯ ಪುಣ್ಯಾಶ್ರಮದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಧರ್ಮ ಉಳಿಯಲು ದಾನಿಗಳು ಹೆಚ್ಚಾಗಬೇಕು. ಅವರವರ ಶಕ್ತಿಗೆ ಅನುಗುಣವಾಗಿ ಉದಾರ ದಾನ ಮಾಡಿ ಸಮುದಾಯ ಭವನ ಹಾಗೂ ಗುರುಭವನ ಸೇರಿದಂತೆ ಇತರೆ ಕೆಲಸಗಳು ಪೂರ್ಣಗೊಳ್ಳುವಂತಾಗಬೇಕು. ಭಕ್ತರಲ್ಲಿ ಗುರುಭಕ್ತಿ ಇನ್ನಷ್ಟು ಹೆಚ್ಚಿಸಲು ಪ್ರತಿ ವರ್ಷ ಪುಣ್ಯಾಶ್ರಮದಲ್ಲಿ ಮೂರು ದಿನ ಮಹಾ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಪುಣ್ಯಾಶ್ರಮದ ಸಂಚಾಲಕ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅವರಿಗೆ ಈಗ ವಯಸ್ಸಾಗಿದೆ. ಆದರೆ ಶಕ್ತಿ ಹಾಗೂ ವಯಸ್ಸು ಮೀರಿ ಕೆಲಸ ಮಾಡಿದ್ದಾರೆ. ಅವರಿಗೆ ಎಲ್ಲರೂ ನೆರವಾಗಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಸಹಕರಿಸಿ, ವೀರಶೈವ ಪರೆಂಪರೆಯ ಸಾಂಸ್ಕೃತಿಕ ನೆಲೆಯಾದ ಪುಣ್ಯಾಶ್ರಮದ ಸಮಗ್ರ ವಿಕಾಸಕ್ಕೆ ಕೈ ಜೋಡಿಸಬೇಕು’ ಎಂದು ಹೇಳಿದರು.

ADVERTISEMENT

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ‘ರೇಣುಕಾದಿ ಪಂಚಾಚಾರ್ಯರ ಇತಿಹಾಸ ಮೂರು ಸಾವಿರ ವರ್ಷಗಳಿಗೂ ಹಳೆಯದು. ಇಂತಹ ಅದ್ವಿತೀಯ ಸಂಸ್ಕೃತಿ ಹೊಂದಿದ ಪಂಚಪೀಠಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಹಂಚಿ ಹೋದ ವೀರಶೈವ ಪರಂಪರೆ ಪುನಃ ಸಂಘಟಿತಗೊಳ್ಳುವುದರಲ್ಲಿ ಎರಡು ಮಾತಿಲ್ಲ’ ಎಂದರು.

ಕಲಬುರಗಿಯ ಉದ್ಯಮಿ ಶಿವಶರಣಪ್ಪ ಸೀರಿ, ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಪತ್ರಕರ್ತ ಶಿವಕುಮಾರ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ಮಂಜುನಾಥ ಬಿರಾದಾರ, ಮಲ್ಲಿಕಾರ್ಜುನ ಚಿಕ್ಕಪೇಟೆ, ಕಾರ್ತಿಕ ಸ್ವಾಮಿ ಜ್ಯಾಂತಿ, ಕಾರ್ತಿಕ ಮಠಪತಿ, ಗುಂಡಯ್ಯ ಸ್ವಾಮಿ, ಪ್ರೊ.ವಿದ್ಯಾವತಿ ಹಿರೇಮಠ, ಶಿವರಾಜ, ನಾಗಯ್ಯ ಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.