
ಬೀದರ್: ವಕೀಲರೊಬ್ಬರ ಅವಹೇಳನ ಮಾಡಿರುವ ಗಾಂಧಿಗಂಜ್ ಠಾಣೆ ಸಿಪಿಐ ಆನಂದರಾವ್ ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ.
ವಕೀಲರ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ನಿಯೋಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸಿವಿಲ್ ದಾವೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿ ಮಾಡಿದ ವಕೀಲ ಸುಂದರರಾಜ ಬಿ. ಫಿರಂಗೆ ಅವರೊಂದಿಗೆ ಸಿಪಿಐ ಅವರು ಅನುಚಿತವಾಗಿ ನಡೆದುಕೊಂಡಿದ್ದಾರೆ. ಏಕ ವಚನ ಬಳಸಿದ್ದಾರೆ. ವಕೀಲರು, ನ್ಯಾಯಾಲಯ, ನ್ಯಾಯವನ್ನು ಹೀಯಾಳಿಸಿದ್ದಾರೆ. ವಕೀಲರ ಘನತೆ, ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಸಿಪಿಐ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಹಿತಕರ ಘಟನೆ ಹಾಗೂ ಸಿವಿಲ್ ಪ್ರಕರಣದಲ್ಲಿ ಪೊಲೀಸ್ ಹಸ್ತಕ್ಷೇಪ ಮರುಕಳಿಸದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಸನ್ಮುಖಯ್ಯ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ ವಿ. ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿ ಧನರಾಜ ಎಸ್. ಬಿರಾದಾರ, ಜಂಟಿ ಕಾರ್ಯದರ್ಶಿ ಬಜರಂಗ ಪಿ. ಕಾಶೆಂಪುರ್, ಖಜಾಂಚಿ ಜಯಶ್ರೀ ಡಿ. ಪಾಟೀಲ, ಮಾಜಿ ಅಧ್ಯಕ್ಷ ಶಿವಶರಣಪ್ಪ ಪಾಟೀಲ, ವಕೀಲ ಗುರುದಾಸ್ ಅಮದಲಪಡ್, ಸಂಜೀವಕುಮಾರ ಸಜ್ಜನ್, ಸಂಘದ ಇತರೆ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.