ಬೀದರ್: ನಗರದ ಐತಿಹಾಸಿಕ ಮಹಮೂದ್ ಗವಾನ್ ಮದರಸಾವನ್ನು ದತ್ತು ಪಡೆದಿರುವ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು, ಸ್ಮಾರಕದ ಜೀರ್ಣೊದ್ಧಾರ ಕಾರ್ಯಕ್ಕೆ ಚಾಲನೆ ನೀಡಿದೆ.
ಮಹಮೂದ್ ಗವಾನ್ ಮದರಸಾ ಆವರಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಶಾಹೀನ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ‘ಐತಿಹಾಸಿಕ ಸ್ಮಾರಕವನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿಸುವ ದಿಸೆಯಲ್ಲಿ ಸಮೂಹವು ಅಗತ್ಯ ಕೆಲಸ ಮಾಡಲಿದೆ’ ಎಂದು ತಿಳಿಸಿದರು.
‘ಸ್ಮಾರಕದ ಸ್ಥಳದಲ್ಲಿ ಲ್ಯಾಂಡ್ ಸ್ಕೇಪ್, ಪಾದಚಾರಿ ಮಾರ್ಗ, ಕಾರಂಜಿ, ಶೌಚಾಲಯ, ಶುದ್ಧ ಕುಡಿಯುವ ನೀರು, ದೀಪಾಲಂಕಾರ, ಸಿಸಿಟಿವಿ ಕ್ಯಾಮರಾ ಅಳವಡಿಕೆ,
ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕೇಂದ್ರ ಸ್ಥಾಪನೆ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಹೇಳಿದರು.
‘ಸ್ಮಾರಕದ ಮಹತ್ವದ ಕುರಿತು ಸುತ್ತಲಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಹೈದರಾಬಾದ್‍ಗೆ ಬರುವ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುವ ಹಾಗೆ ಸ್ಮಾರಕದ ಅಂದ ಹೆಚ್ಚಿಸಲಾಗುವುದು. ಗೈಡ್‍ಗಳಿಗೆ ತರಬೇತಿ ನೀಡಲಾಗುವುದು. ಐದು ವರ್ಷಗಳ ಅವಧಿಗೆ ಸ್ಮಾರಕದ ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಶಾಹೀನ್ ಕೇಂದ್ರ ಸ್ಥಾನದಲ್ಲಿರುವ ಮಹಮೂದ್ ಗವಾನ್ ಮದರಸಾ ಹಿಂದೆ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. 25 ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ
ಬರುತ್ತಿದ್ದರು. ವಿವಿಧ ವಿಷಯಗಳನ್ನು ಕಲಿಯುತ್ತಿದ್ದರು. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಸಮೂಹವು ಮದರಸಾವನ್ನು ದತ್ತು ಸ್ವೀಕರಿಸಿದೆ’ ಎಂದು ಹೇಳಿದರು.
ವಿಶ್ರಾಂತ ಕುಲಪತಿ ಮುಹಮ್ಮದ್ ಸಲ್ಮಾನ್ ಸಿದ್ದಿಕಿ, ಮೌಲಾನಾ ಅಝರ್ ಮದನಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಿರಿಯ ಸಂರಕ್ಷಣಾ ಸಹಾಯಕ ಅಜಯ್ ಜನಾರ್ದನ್, ಪತ್ರಕರ್ತರಾದ ದೇವು ಪತ್ತಾರ್, ಹೃಷಿಕೇಶ್ ಬಹಾದ್ದೂರ್, ದೇಸಾಯಿ, ಇತಿಹಾಸಕಾರ ಸಮದ್ ಭಾರತಿ, ಅಬ್ದುಲ್ ಮಾಜೀದ್, ಪ್ರೊ. ದಾನೀಶ್ ಮೊಯಿನ್, ಪ್ರೊ. ಸೈಯದ್ ಅಯೂಬ್ ಅಲಿ, ಮೀರ್ ಮೊಹತೆಶಾಮ್ ಅಲಿ ಖಾನ್, ಸೈಯದ್ ಝಹಿದ್ ಅಲಿ ಅಖ್ತರ್, ಶಾಹೀನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಹಸೀಬ್, ಸಿಇಒ ತೌಸೀಫ್ ಮಡಿಕೇರಿ ಮತ್ತಿತರರು ಹಾಜರಿದ್ದರು.