ADVERTISEMENT

ದರೋಡೆ, ಸುಲಿಗೆ ಪ್ರಕರಣ; ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:28 IST
Last Updated 14 ಮೇ 2025, 14:28 IST
   

ಬೀದರ್‌: ನಗರದ ಗಾಂಧಿ ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ, ಸುಲಿಗೆ ಹಾಗೂ ಮನೆಗಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಾಂಧಿ ಗಂಜ್‌ ಠಾಣೆ ವ್ಯಾಪ್ತಿಯಲ್ಲಿ ಒಂದು ದರೋಡೆ, ನಾಲ್ಕು ಸುಲಿಗೆ ಪ್ರಕರಣ ಹಾಗೂ ಮೂರು ಮನೆಗಳವು ಸೇರಿದಂತೆ ಒಟ್ಟು ಎಂಟು ಪ್ರಕರಣಗಳಲ್ಲಿ ಐದು ಜನರನ್ನು ಬಂಧಿಸಿ, ಅವರಿಂದ ₹59.60 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.

‘ಮಾರ್ಚ್‌ 25ರಂದು ನಡೆದ ಮೂರು ಮನೆಗಳ್ಳತನ ಪ್ರಕರಣಗಳಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು, 35 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿಯ ಆಭರಣಗಳು, ಕೃತ್ಯ ಬಳಸಿದ ಬೈಕ್‌ ಸೇರಿದಂತೆ ಒಟ್ಟು ₹32.80 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

ಏಪ್ರಿಲ್‌ 26ರಂದು ನಗರದ ಓಲ್ಡ್‌ ಆದರ್ಶ ಕಾಲೊನಿಯಲ್ಲಿ ಜ್ಯೋತಿಲತಾ ಅವರ ಮನೆಗೆ ನುಗ್ಗಿ ₹15.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಡಕಾಯಿತಿ ಮಾಡಿದ್ದ ಪ್ರಕರಣ ಸಂಬಂಧ ತಾಲ್ಲೂಕಿನ ಹೊನ್ನಿಕೇರಿ ಬಳಿ ಮೇ 2ರಂದು ಮೂವರನ್ನು ಬಂಧಿಸಲಾಗಿದೆ. ಆರೋಪಿತರು ಕೊಟ್ಟ ಮಾಹಿತಿ ಆಧರಿಸಿ, 132 ಗ್ರಾಂ ಚಿನ್ನಾಭರಣ, 480 ಗ್ರಾಂ ಬೆಳ್ಳಿ ಆಭರಣ, ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಇಕೋ ವಾಹನ, ಒಂದು ಝರ್ರಾ ನಕಲಿ ಪಿಸ್ತೂಲ್‌ ಸೇರಿದಂತೆ ಒಟ್ಟು ₹14.90 ಲಕ್ಷ ಮೌಲ್ಯದ ವಸ್ತು ರಿಕವರಿ ಮಾಡಲಾಗಿದೆ ಎಂದು ವಿವರಿಸಿದರು.

ಏಪ್ರಿಲ್‌ 27ರಂದು ಇದೇ ಠಾಣೆ ವ್ಯಾಪ್ತಿಯಲ್ಲಿ ನಡೆದ ನಾಲ್ಕು ಸರಗಳ್ಳತನ ಪ್ರಕರಣಗಳಲ್ಲಿ 140 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ ಬೈಕ್‌ ಸೇರಿದಂತೆ ಒಟ್ಟು ₹11.90 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಈ ಎಲ್ಲ ಪ್ರಕರಣಗಳ ತನಿಖೆಗೆ ನೇಮಿಸಲಾಗಿದ್ದ ತನಿಖಾ ದಳದ ತಂಡದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವನಗೌಡ ಪಾಟೀಲ, ಗಾಂಧಿಗಂಜ್‌ ಠಾಣೆಯ ಪಿಐ ಆನಂದರಾವ್‌ ಎಸ್‌.ಎನ್‌., ಗ್ರಾಮೀಣ ವೃತ್ತ ಠಾಣೆಯ ಪಿಐ ಜಿ.ಎಸ್‌. ಬಿರಾದಾರ, ನೂತನ ನಗರ ಠಾಣೆಯ ಪಿಐ ವಿಜಯಕುಮಾರ, ಬೀದರ್‌ ಗ್ರಾಮೀಣ ಠಾಣೆಯ ಪಿಐ ಮಲ್ಲಿಕಾರ್ಜುನ ಯಾತನೂರ, ಔರಾದ್‌ ಪಿಐ ರಘುವೀರ ಸಿಂಗ್‌ ಠಾಕೂರ್‌, ಸಿಬ್ಬಂದಿ ನವೀನ್‌, ಅನಿಲ್‌, ಆರಿಫ್‌, ಇರ್ಫಾನ್‌, ಗಂಗಾಧರ, ಸುಧಾಕರ, ಇಮ್ರಾನ್‌, ಪ್ರಶಾಂತ, ಮಲ್ಲಿಕಾರ್ಜುನ, ನಿಂಗಪ್ಪ, ರಾಹುಲ ಹಿಬ್ಬಾರೆ, ವಿಜಯಕುಮಾರ ಬಾಳೂರೆ, ಅಶೋಕ ಕೋಟೆ, ಹರ್ಷಾ, ತಾಂತ್ರಿಕ ಅಧಿಕಾರಿ ವಿ.ಎಸ್‌. ಮಂಕಣಿ ಇದ್ದರು ಎಂದು ತಿಳಿಸಿದರು.

‘ನಿಯಮದನ್ವಯ ಭಗವಂತ ಖೂಬಾ ಭದ್ರತೆ ಹಿಂದಕ್ಕೆ’

‘ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರ ಗೃಹ ಕಚೇರಿಗೆ ಒದಗಿಸಲಾಗಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ನಿಯಮದ ಪ್ರಕಾರ ಹಿಂಪಡೆಯಲಾಗಿದೆ. ಸರ್ಕಾರದ ನಿಯಮದ ಪ್ರಕಾರ, ಅವರಿಗೆ ಗನ್‌ಮ್ಯಾನ್‌ ಭದ್ರತಾ ಸೇವೆ ಮುಂದುವರೆಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಭದ್ರತೆ ಹಿಂಪಡೆದಿರುವುದಕ್ಕೆ ಖೂಬಾ ಅವರು ಎಸ್ಪಿಯವರನ್ನು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.