ADVERTISEMENT

ಬೀದರ್: ಮಾಹಿತಿ ನೀಡದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಿ

ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 15:15 IST
Last Updated 11 ಜೂನ್ 2020, 15:15 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್ 19 ನಿಯಂತ್ರಣ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌.ಮಾತನಾಡಿದರು. ಗ್ಯಾನೇಂದ್ರಕುಮಾರ ಗಂಗ್ವಾರ್, ಅಕ್ಷಯ ಶ್ರೀಧರ್ ಹಾಗೂ ರುದ್ರೇಶ ಘಾಳಿ ಇದ್ದಾರೆ
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್ 19 ನಿಯಂತ್ರಣ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌.ಮಾತನಾಡಿದರು. ಗ್ಯಾನೇಂದ್ರಕುಮಾರ ಗಂಗ್ವಾರ್, ಅಕ್ಷಯ ಶ್ರೀಧರ್ ಹಾಗೂ ರುದ್ರೇಶ ಘಾಳಿ ಇದ್ದಾರೆ   

ಬೀದರ್‌: ‘ಜಿಲ್ಲೆಯಲ್ಲಿನ ಯಾವುದೇ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತ ಕೇಳುವ ಮಾಹಿತಿ ಒದಗಿಸದೇ ಇದ್ದರೆ ಅಂಥ ಆಸ್ಪತ್ರೆಗಳ ಮೇಲೆ ಕೆಪಿಎಂಎ ಕಾಯ್ದೆಯ ಪ್ರಕಾರ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೋವಿಡ್–19 ನಿಯಂತ್ರಣ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ವೈದ್ಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲಾಡಳಿತ ಕೇಳುವ ಮಾಹಿತಿಯನ್ನು ಸಂಬಂಧಿಸಿದ ವೆಬ್‌ಪೋರ್ಟ್‌ಲನಲ್ಲಿ ಆಯಾ ಆಸ್ಪತ್ರೆಗಳು ಪ್ರತಿ ದಿನ ಅಪ್‌ಲೋಡ್ ಮಾಡುವಂತೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಆಸ್ಪತ್ರೆಗಳ ನೋಂದಣಿಯನ್ನು ರದ್ದುಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಕಂಟೇನ್ಮೆಂಟ್ ಝೋನ್‌ದಲ್ಲಿ ಸಮೀಕ್ಷೆ ನಡೆಸಿ ಆ ಪ್ರದೇಶದಲ್ಲಿನ ಕೆಮ್ಮು, ನೆಗಡಿ ಮತ್ತು ಜ್ವರ ಮತ್ತು ಉಸಿರಾಟದ ತೊಂದರೆ ಇರುವ ಪ್ರಕರಣಗಳನ್ನು ಪತ್ತೆ ಮಾಡಬೇಕು. ಆ ಪ್ರದೇಶದಲ್ಲಿನ ಗರ್ಭಿಣಿಯರ, ವಯಸ್ಸಾದವರ, ಹೃದಯಕಾಯಿಲೆ, ಮಧುಮೇಹದಂಥ ರೋಗಪೀಡಿತರ ಗಂಟಲುದ್ರವ ಮಾದರಿ ಪರೀಕ್ಷೆ ಮಾಡಬೇಕು’ ಎಂದು ಹೇಳಿದರು.

‘ಕೋವಿಡ್–19 ನಿಯಂತ್ರಣದ ಜತೆಗೆ ಆರೋಗ್ಯ ಸೌಕರ್ಯ ಕಲ್ಪಿಸುವ ಕಾರ್ಯ ಕೂಡ ಜತೆಜತೆಗೆ ನಡೆಯುತ್ತಿರಬೇಕು. ಹೊಸ ಅಂಬುಲೆನ್ಸ್ ಖರೀದಿ ಸೇರಿದಂತೆ ಜಿಲ್ಲೆಗೆ ಬರಬೇಕಾದ ಅವಶ್ಯಕ ವೈದ್ಯಕೀಯ ಉಪಕರಣಗಳು ಹಾಗೂ ಇತರ ಆರೋಗ್ಯ ಸೌಕರ್ಯ ಪಡೆಯುವ ಬಾಕಿ ಕಾರ್ಯದ ಬಗ್ಗೆ ಗಮನ ಕೊಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ, ಡಿಎಸ್‌ಒ ಡಾ.ಕೃಷ್ಣಾ ರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ಇಂದುಮತಿ ಪಾಟೀಲ, ಡಾ.ದೀಪಾ ಖಂಡ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.