ಬೀದರ್: ಲಿಂಗಾಯತರು ಹಾಗೂ ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿ, ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಬಂಧನಕ್ಕೆ ಆಗ್ರಹಿಸಿ ಬಸವಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕನೇರಿ ಸ್ವಾಮೀಜಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ದಿಕ್ಕಾರ, ದಿಕ್ಕಾರ ಎಂದು ಘೋಷಣೆ ಹಾಕಿದರು. ಆನಂತರ ವಿವಿಧ ವೃತ್ತಗಳು ಹಾಗೂ ಪ್ರಮುಖ ಮಾರ್ಗಗಳ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ರ್‍ಯಾಲಿ ನಡೆಸಿದರು.ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ಕನೇರಿ ಮಠದಿಂದ ಉಚ್ಚಾಟನೆ ಮಾಡಬೇಕು. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು.ಅವರು ಕರ್ನಾಟಕದಲ್ಲಿ ಓಡಾಡದಂತೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಾಡಿನ ಮಠಾಧೀಶರ ಬಗ್ಗೆ ಅವಾಚ್ಯವಾಗಿ ಮಾತನಾಡುವುದರ ಮೂಲಕ ಕನೇರಿ ಸ್ವಾಮೀಜಿ ಹೀನ ಬುದ್ಧಿ ಪ್ರದರ್ಶಿಸಿದ್ದಾರೆ. ಗುರು ಬಸವಣ್ಣನವರನ್ನು ದ್ವೇಷಿಸುವ ವ್ಯಕ್ತಿ ಈ ಲಿಂಗಾಯತ ಮಠಾಧೀಶರನ್ನು ಅವಮಾನಿಸಿ ಮಾತನಾಡಿರುವುದು ಅಕ್ಷಮ್ಯ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ್ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಯುವ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಗಣೇಶ ಬಿರಾದಾರ, ಮುಖಂಡರಾದ ಬಸವರಾಜ ಬುಳ್ಳಾ, ಸಿದ್ದು ಶೆಟಕಾರ್, ಶ್ರೀನಾಥ ಕೋರೆ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.