ಬೀದರ್: ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ ರಥಯಾತ್ರೆಗೆ ಚಾಲನೆ
ಬೀದರ್: ‘ಅಕ್ಬರ್ ದಿ ಗ್ರೇಟಾ’ ಅಥವಾ ‘ಶಿವಾಜಿ ದಿ ಗ್ರೇಟಾ’, ‘ಕಿತ್ತೂರ ರಾಣಿ ಚನ್ನಮ್ಮ ದಿ ಗ್ಟಾ’, ‘ರಾಣಿ ಅಬ್ಬಕ್ಕ ದಿ ಗ್ರೇಟಾ’, ಇವರಲ್ಲಿ ‘ಯಾರು ದಿ ಗ್ರೇಟ್’ ಎಂಬುದನ್ನು ಓದಬೇಕೆಂಬ ಪ್ರಶ್ನೆ ನಮ್ಮ ಮುಂದಿದೆ’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ಉತ್ತರ ಪ್ರಾಂತದಿಂದ ನಗರದ ಬಸವ ಮುಕ್ತಿ ಮಂದಿರದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಣಿ ಅಬ್ಬಕ್ಕ 500ನೇ ಜಯಂತಿ ಉತ್ಸವ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಅವರ 200 ವರ್ಷದ ವಿಜಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ರಥಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಪದವಿಯಲ್ಲಿದ್ದಾಗ ‘ಅಕ್ಬರ್ ದಿ ಗ್ರೇಟ್’ ಎಂದು ಪಠ್ಯದಲ್ಲಿ ಓದಿದ್ದೇನೆ. ಯಾರು ನಮ್ಮ ರಾಷ್ಟ್ರ, ನಮ್ಮ ಧರ್ಮ, ಸಂಸ್ಕೃತಿ, ದೇವಸ್ಥಾನಗಳಿಗೆ ತೊಂದರೆ ಮಾಡಿದ್ದರೋ ಅಂತಹವರ ಇತಿಹಾಸ ಓದಿದ್ದೇನೆ. ಆದರೆ, ಚನ್ನಮ್ಮ, ಅಬ್ಬಕ್ಕ, ಸಂಗೊಳ್ಳಿ ರಾಯಣ್ಣನವರ ಕೊಡುಗೆ ಬಗ್ಗೆ ನಾವೆಷ್ಟೂ ಓದಿದ್ದೇವೆ? ಅವರ ಬಗ್ಗೆ ನಮಗೆಷ್ಟು ಗೊತ್ತಿದೆ ಎಂದು ಪ್ರಶ್ನಿಸಿದ ಅವರು, ಸಂಗೊಳ್ಳಿ ರಾಯಣ್ಣನ ಕುರಿತ ಸಿನಿಮಾ ಬರುವವರೆಗೆ ಅವರ ಚರಿತ್ರೆಯ ಅರಿವಿರಲಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪಠ್ಯದಲ್ಲಿ ಎಷ್ಟು ಸೇರಿಸಿದ್ದೇವೆ? ವಿದ್ಯಾರ್ಥಿಗಳಿಗೆ ಯಾರು ಪ್ರೇರಣೆ? ನಾವು ಪಠ್ಯದಲ್ಲಿ ಎಷ್ಟು ಓದಿದ್ದೇವೆ? ಎಷ್ಟು ಬಿಟ್ಟಿದ್ದೇವೆ? ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಈ ದೇಶಕ್ಕಾಗಿ ಹೋರಾಡಿದ ಧೀರ ಮಹಿಳೆಯರು. ಅವರ ಶೌರ್ಯ, ಸಾಹಸವನ್ನು ಪರಿಚಯಿಸಲು ಎಬಿವಿಪಿ ಈ ರಥಯಾತ್ರೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಒಂದು ಕುಟುಂಬದ ವೈಭವೀಕರಣದ ಗುಂಗಿನಲ್ಲಿ, ಜಾತ್ಯತೀತ ಹೆಸರಿನಲ್ಲಿ ಈ ದೇಶದ ಮಹಾನುಭವರ ಬಗ್ಗೆ ನಮ್ಮ ಮಕ್ಕಳಿಗೆ ಏನು ಕಲಿಸಿಕೊಡಲಿಲ್ಲ. ಭಗತ್ ಸಿಂಗ್, ನೇತಾಜಿ ಸುಭಾಷಚಂದ್ರ ಬೋಸ್ ಸೇರಿದಂತೆ ಯಾರ ಬಗ್ಗೆಯೂ ತಿಳಿಸಲಿಲ್ಲ. ಈ ರಥಯಾತ್ರೆ ಮೂಲಕ ಅಂತಹವರ ಯಶೋಗಾಥೆ ತಿಳಿಸಲು ಎಬಿವಿಪಿ ಮುಂದಾಗಿದೆ ಎಂದರು.
ತಮ್ಮವರ ಮೋಸ, ವಂಚನೆಯಿಂದಲೇ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಬಂಧಿಯಾದರು. ಇಂತಹ ಮೋಸ, ವಂಚನೆ ನಮ್ಮ ದೇಶದೊಳಗೆ ಈಗಲೂ ನಡೆಯುತ್ತಿದೆ. ಹಿತ ಶತ್ರುಗಳು ಯಾರು? ಭಾರತವನ್ನು ದುರ್ಬಲಗೊಳಿಸಲು ನಮ್ಮ ದೇಶದ ಕೆಲವರು ವಿದೇಶದವರೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಈ ದೇಶ ಉಳಿಸಬೇಕು ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಮಾತನಾಡಿ, ಯುವಕರು ನಿತ್ಯ ಮೊಬೈಲ್‌ನಲ್ಲಿ ಕನಿಷ್ಠ ಹತ್ತು ನಿಮಿಷ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆ ಓದಬೇಕು ಎಂದರು.
ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಥಯಾತ್ರೆ ಸಹ ಸಂಚಾಲಕಿ ಸುಜ್ಞಾತ ಕುಲಕರ್ಣಿ ನಿರೂಪಿಸಿದರು. ಸಂತೋಷಕುಮಾರ ಹಂಗರಗಿ ಸ್ವಾಗತಿಸಿದರೆ, ನಾಗರಾಜ ಸುಲ್ತಾನಪೂರ ವಂದಿಸಿದರು.
‘ದೇಶ ಉಳಿದರೆ ನಾವೆಲ್ಲ ಉಳಿಯುತ್ತೇವೆ’
‘ದೇಶ ಉಳಿದರೆ ಕಾವಿ, ಮಠ ಮಂದಿರಗಳು, ಹೆಣ್ಣು ಮಕ್ಕಳ ಮಾನ–ಮರ್ಯಾದೆ ಹಾಗೂ ನಾವೆಲ್ಲ ಉಳಿಯುತ್ತೇವೆ. ನಮ್ಮ ದೇಶದಿಂದ ವಿಭಜನೆಗೊಂಡು ಪ್ರತ್ಯೇಕವಾಗಿರುವ ದೇಶಗಳಲ್ಲಿ ದೇವಸ್ಥಾನ, ಕಾವಿ ಬಟ್ಟೆ, ನಮ್ಮ ಸಂಸ್ಕೃತಿ ಇಲ್ಲ. ಅದನ್ನು ನಂಬುವ ಜನರೂ ಇಲ್ಲ’ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ದೇಶದ ಬಗ್ಗೆ ಮಕ್ಕಳು ಚಿಂತಿಸಬೇಕು. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ದೇಶಕ್ಕೆ ಕೊಡುಗೆ ಕೊಡಬೇಕು. 2047ಕ್ಕೆ ವಿಕಸಿತ ಭಾರತ ಆಗುತ್ತದೆ. ವಿಕಸಿತ ಭಾರತ ಮಾಡುವುದು ವಿದ್ಯಾರ್ಥಿಗಳ ಜವಾಬ್ದಾರಿ. ಆ ದಾರಿಯಲ್ಲಿ ಸಾಗಬೇಕು. ವಿದ್ಯಾರ್ಥಿಗಳು ರಾಷ್ಟ್ರೀಯ ವಿಚಾರಧಾರೆಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ಮಾಡಿದರು.
‘ಒಂದು ಕುಟುಂಬದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ’
‘ಅಹಿಂಸೆಯಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಒಂದೇ ಕುಟುಂಬದ ಬಗ್ಗೆ ತಿಳಿಸುವ ಕೆಲಸ ನಮ್ಮ ಸರ್ಕಾರಗಳು ಮಾಡಬಾರದು. ಭಾರತಕ್ಕೆ ಒಂದು ಕುಟುಂಬದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ’ ಎಂದು ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಾಲಿನಿ ವರ್ಮಾ ಹೇಳಿದರು.
ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ಅನೇಕರ ತ್ಯಾಗ, ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದರ ಬಗ್ಗೆ ತಿಳಿಸುವ ಕೆಲಸ ಎಬಿವಿಪಿ ಮಾಡುತ್ತಿದೆ ಎಂದರು.
ರಥಯಾತ್ರೆ ಎರಡು ಸಾವಿರ ಕಿ.ಮೀ ಸಂಚಾರ
ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಅವರ ಸಾಧನೆ ಮೇಲೆ ಬೆಳಕು ಚೆಲ್ಲಲು ಎಬಿವಿಪಿಯಿಂದ ಎರಡು ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಒಂದು ರಥಯಾತ್ರೆ ಬೀದರ್‌ನಿಂದ, ಇನ್ನೊಂದು ಧಾರವಾಡದಿಂದ ಆರಂಭಗೊಂಡಿದೆ. ಎರಡೂ ರಥಗಳು ಎರಡು ಸಾವಿರ ಕಿ.ಮೀ ಕ್ರಮಿಸಲಿವೆ. ಸೆ. 25ರಂದು ಬೆಳಗಾವಿಯಲ್ಲಿ ಸಮಾವೇಶಗೊಳ್ಳಲಿವೆ. ಇದಾದ ನಂತರ ರಥಗಳು ಹರಿದ್ವಾರಕ್ಕೆ ತಲುಪಲಿವೆ ಎಂದು ತಿಳಿಸಿದರು.
50 ಲಕ್ಷ ಸದಸ್ಯರನ್ನು ಹೊಂದಿರುವ ಜಗತ್ತಿನ ಅತಿದೊಡ್ಡ ಸಂಘಟನೆ ಎಬಿವಿಪಿ. ನಮ್ಮ ನಿಜವಾದ ರೋಲ್ ಮಾಡೆಲ್‌ಗಳನ್ನು ಯುವಪೀಳಿಗೆಗೆ ಪರಿಚಯಿಸಲು ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಉದ್ದೇಶ ವಿವರಿಸಿದರು.
ಮಾರ್ಗದುದ್ದಕ್ಕೂ ರಥಕ್ಕೆ ಹೂಮಳೆ
ಬೀದರ್‌ನ ಸಿದ್ದಾರೂಢ ಮಠದಿಂದ ಆರಂಭಗೊಂಡ ರಥಯಾತ್ರೆಗೆ ಮಾರ್ಗುದುದ್ದಕ್ಕೂ ಹೂಮಳೆಗೆರೆದು ಸ್ವಾಗತಿಸಲಾಯಿತು.
ಗುಂಪಾ, ಕುಂಬಾರವಾಡ ಕ್ರಾಸ್, ರಾಂಪೂರೆ ಕಾಲೊನಿ ಕ್ರಾಸ್, ಬಿವಿಬಿ ಕಾಲೇಜು ಮೂಲಕ ಹಾದು ಬಸವ ಮುಕ್ತಿ ಮಂದಿರ ತಲುಪಿತು. ರಸ್ತೆಯುದ್ದಕ್ಕೂ ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಸಾಲಾಗಿ ನಿಂತು ರಥದ ಮೇಲೆ ಹೂಮಳೆಗರೆದರು. ಅಲಂಕರಿಸಿದ ರಥದಲ್ಲಿ ರಾಣಿ ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕನವರ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಬಳಿಕ ರಥವು ಹುಮನಾಬಾದ್ ಕಡೆಗೆ ಪಯಣ ಬೆಳೆಸಿತು.
ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಸ್ವಾಗತ ಸಮಿತಿ ಕಾರ್ಯದರ್ಶಿ ಶಶಿ ಹೊಸಳ್ಳಿ, ಉಪಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ರತ್ನಾ ಪಾಟೀಲ, ಸಂಚಾಲಕ ಗುರುನಾಥ ರಾಜಗೀರಾ, ಮುಖಂಡರಾದ ರಘುನಾಥರಾವ್ ಮಲ್ಕಾಪುರೆ, ಸಂತೋಷ ಹಂಗರಗಿ, ಹೇಮಂತ, ಚಂದ್ರಶೇಖರ ಬಿರಾದಾರ, ವೀರೇಶ ಸ್ವಾಮಿ, ಅಶೋಕ ಶೆಂಬೆಳ್ಳಿ, ರೇವಣಸಿದ್ದ ಜಾಡರ, ಈಶ್ವರ ರುಮ್ಮಾ, ಅಶೋಕ ಹೊಕ್ರಾಣಿ, ಭೀಮಣ್ಣಾ ಸೋರಳ್ಳಿ, ಗೋರಖನಾಥ ಕುಂಬಾರ, ನಾಗರಾಜ, ಸ್ನೆಹಾ, ಪ್ರಾರ್ಥನಾ, ಆನಂದ, ಮಹೇಶ, ಪವನ ಕುಂಬಾರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.