ADVERTISEMENT

ರೈಲು ನಿಲ್ದಾಣ ನವೀಕರಣ ಅನುದಾನ ಪರಿಷ್ಕರಿಸಿದ್ದೇಕೆ: ಸಾಗರ್ ಖಂಡ್ರೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:34 IST
Last Updated 17 ಫೆಬ್ರುವರಿ 2026, 5:34 IST
ಬೀದರ್‌ನಲ್ಲಿ ಸೋಮವಾರ ನಡೆದ ‘ದಿಶಾ’ ಸಮಿತಿ ಸಭೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಮಾತನಾಡಿದರು
ಬೀದರ್‌ನಲ್ಲಿ ಸೋಮವಾರ ನಡೆದ ‘ದಿಶಾ’ ಸಮಿತಿ ಸಭೆಯಲ್ಲಿ ಸಂಸದ ಸಾಗರ್‌ ಖಂಡ್ರೆ ಮಾತನಾಡಿದರು   

ಬೀದರ್‌: ‘ಬೀದರ್‌ ರೈಲು ನಿಲ್ದಾಣದ ನವೀಕರಣ ಕಾಮಗಾರಿಗೆ ₹25 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದನ್ನು ₹40 ಕೋಟಿಗೆ ಪರಿಷ್ಕರಿಸಿದ್ದೇಕೆ? ಏಕಾಏಕಿ ₹15 ಕೋಟಿ ಹೆಚ್ಚಿಸಲು ಕಾರಣವೇನು?’

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಸಾಗರ್ ಖಂಡ್ರೆ ಅವರು, ರೈಲ್ವೆ ಇಲಾಖೆಯ ಅಧಿಕಾರಿಯನ್ನು ಮೇಲಿನಂತೆ ಪ್ರಶ್ನಿಸಿದರು.

ಈ ಮೊದಲು ರೈಲು ನಿಲ್ದಾಣಕ್ಕೆ ₹25 ಕೋಟಿ ಅನುದಾನ ಮಂಜೂರಾಗಿ ಬಿಡುಗಡೆಯಾಗಿದೆ. ಬಳಿಕ ಅದನ್ನು ₹40 ಕೋಟಿಗೆ ಹೆಚ್ಚಿಸಿ, ವಿನ್ಯಾಸ ಬದಲಿಸಿದವರು ಯಾರು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆಯ ಅಧಿಕಾರಿ, ಸಿಕಿಂದ್ರಾಬಾದ್‌ ರೈಲ್ವೆ ಹಿರಿಯ ವಿಭಾಗೀಯ ಕಚೇರಿಯ ‘ಗತಿ ಶಕ್ತಿ’ ಇಲಾಖೆಯು ನವೀಕರಣ ವಿನ್ಯಾಸವನ್ನು ಬದಲಿಸಿ, ಅನುದಾನ ಹೆಚ್ಚಿಸಿದೆ. ಎಲ್ಲ ವಸ್ತುಗಳ ಬೆಲೆ ಕೂಡ ಈ ಅವಧಿಯಲ್ಲಿ ಹೆಚ್ಚಳವಾಗಿರುವುದು ಕೂಡ ಇನ್ನೊಂದು ಪ್ರಮುಖ ಕಾರಣ ಎಂದರು.

ADVERTISEMENT

ಈಗಾಗಲೇ 2 ಮತ್ತು 3ನೇ ಪ್ಲಾಟ್‌ಫಾರಂ ಕೆಲಸ ಪೂರ್ಣಗೊಂಡಿದ್ದು, ಎಲ್ಲ ಕೆಲಸ ಮಾರ್ಚ್‌ನೊಳಗೆ ಮುಗಿಸಿ ಏಪ್ರಿಲ್‌ನಲ್ಲಿ ಉದ್ಘಾಟನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದರು.

ಕೃಷಿ ವಲಯದ ಬಲವರ್ಧನೆಗೆ ಒತ್ತು: ಬೀದರ್ ಜಿಲ್ಲೆಯ ರೈತರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ವೇಗ ನೀಡಲು ಜಾರಿಗೆ ತಂದಿರುವ ‘ಸಮಗ್ರ ಕೃಷಿ ಸಮೂಹಗಳ ಯೋಜನೆ’ ಅಡಿಯಲ್ಲಿ ಜಿಲ್ಲೆಯ ಪ್ರಮುಖ ಒಕ್ಕೂಟಗಳಿಗೆ ಅನುದಾನ ಒದಗಿಸಿ, ಕೃಷಿ ವಲಯದ ಬಲವರ್ಧನೆಗೆ ಒತ್ತು ನೀಡಲಾಗುತ್ತಿದೆ ಎಂದು ಸಂಸದ ಸಾಗರ್‌ ಖಂಡ್ರೆ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 24 ಕ್ಲಸ್ಟರ್‌ಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಆಯ್ದ 8 ಕ್ಲಸ್ಟರ್‌ಗಳಿಗೆ ತಲಾ ₹20 ಲಕ್ಷದಂತೆ ಒಟ್ಟು ₹1.60 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಈಗಾಗಲೇ ಮೊದಲ ಹಂತದಲ್ಲಿ ಜಿಲ್ಲೆಯ ಹುಮನಾಬಾದ್, ಬಸವಕಲ್ಯಾಣ, ಔರಾದ್, ಕಮಲನಗರ ಮತ್ತು ಭಾಲ್ಕಿ ತಾಲ್ಲೂಕಿನ ಐದು ಕ್ಲಸ್ಟರ್‌ಗಳಿಗೆ ತಲಾ ₹20 ಲಕ್ಷ ಅನುದಾನ ತಲುಪಿದೆ. ಉಳಿದ ಮೂರು ಪ್ರಮುಖ ತಾಲ್ಲೂಕುಗಳ ಒಕ್ಕೂಟಗಳಿಗೆ ಈ ದಿನ ಚೆಕ್‌ ವಿತರಿಸಲಾಗಿದೆ. ಇದರಲ್ಲಿ ಬೀದರ್‌ ತಾಲ್ಲೂಕಿನ ಜನವಾಡದ ಕೃಷ್ಣ ಸಂಜೀವಿನಿ, ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಸಂಜೀವಿನಿ, ಹುಲಸೂರ ತಾಲ್ಲೂಕಿನ ವೈಭವ ಸಂಜೀವಿನಿ ಸೇರಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಬೀದರ್‌ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್‌ ಜೈನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್‌ ರೆಡ್ಡಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.
ಸಾಗರ್‌ ಖಂಡ್ರೆ ಸಂಸದ

‘ನನ್ನ ಬದಲು ಬೇರೊಬ್ಬರನ್ನು ಕಳಿಸಬಹುದಾ?

’ ‘ನನ್ನ ಸ್ಥಳದಲ್ಲಿ ಬೇರೋಬ್ಬರನ್ನು ಕಳಿಸಿ ಸಭೆ ಮಾಡಬಹುದಾ ಎಂದು ಪ್ರಶ್ನಿಸಿದ ಸಾಗರ್‌ ಖಂಡ್ರೆ ಎಪಿಎಂಸಿ ಅಧಿಕಾರಿ ಸಭೆಗೆ ಗೈರಾಗಿ ಕೆಳಹಂತದ ಸಿಬ್ಬಂದಿಯನ್ನು ಕಳಿಸಿರುವುದು ಸರಿಯಲ್ಲ. ಅವರನ್ನು ಸಭೆಗೆ ಕರೆಸಿ ಇಲ್ಲವಾದರೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಬಯೋಮೆಟ್ರಿಕ್‌ ಕಡ್ಡಾಯವಾಗಿ ಅಳವಡಿಸಬೇಕು. ಎಲ್ಲೆಲ್ಲಿ ಇನ್ನೂ ಈ ಕೆಲಸವಾಗಿಲ್ಲ ಇದರ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

‘ನಿತ್ಯ ಮಾಧ್ಯಮಗಳಲ್ಲಿ ಬ್ರಿಮ್ಸ್‌ ಸುದ್ದಿಯೇಕೆ?’

‘ನಿತ್ಯ ಮಾಧ್ಯಮಗಳಲ್ಲಿ ಬ್ರಿಮ್ಸ್‌ ಸುದ್ದಿಯೇಕೆ ಬರುತ್ತದೆ. ಅಲ್ಲಿ ಏನು ಸಮಸ್ಯೆ ಇದೆ’ ಎಂದು ಸಾಗರ್‌ ಖಂಡ್ರೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ ಸದ್ಯ ಯಾವುದೇ ರೀತಿಯ ಸಮಸ್ಯೆ ಇಲ್ಲ. ಜಿಲ್ಲೆಯ ಕೆಲವೆಡೆ ನಡೆಸಲಾಗುತ್ತಿದ್ದ ಅನಧಿಕೃತ ಕ್ಲಿನಿಕ್‌ ಬಂದ್‌ ಮಾಡಿಸಲಾಗಿದೆ. ಮೂರು ಸ್ಕ್ಯಾನಿಂಗ್‌ ಕೇಂದ್ರಗಳ ಮೇಲೆ ದಾಳಿ ನಡೆಸಿ ಕ್ರಮ ಜರುಗಿಸಲಾಗಿದೆ ಎಂದು ವಿವರಣೆ ನೀಡಿದರು. ‘ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಬಿಟೀಸ್‌ ಬಿಪಿ ಸೇರಿದಂತೆ ಯಾವೆಲ್ಲ ಮಾತ್ರೆಗಳು ಉಚಿತವಾಗಿ ಸಿಗುತ್ತವೆಯೋ ಅವುಗಳ ಬಗ್ಗೆ ವಿಡಿಯೊ ಮಾಡಿ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ವರದಿ ಬರಲು ಇನ್ನೆಷ್ಟು ದಿನ ಬೇಕು?

‘ಔರಾದ್‌ ತಾಲ್ಲೂಕಿನ ಜಮಾಲಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಘಟನೆ ನಡೆದು 15ಕ್ಕೂ ಹೆಚ್ಚು ದಿನಗಳಾಗಿವೆ. ವರದಿ ಬರಲು ಇನ್ನೆಷ್ಟು ದಿನಗಳು ಬೇಕು’ ಎಂದು ಸಾಗರ್‌ ಖಂಡ್ರೆ ಬೇಸರದಿಂದ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಈಗಾಗಲೇ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅದರ ವರದಿಯ ನಿರೀಕ್ಷೆಯಲ್ಲಿದ್ದೇವೆ ಎಂದರು. ಒಂದು ವರದಿ ಬರಲು ಇನ್ನೆಷ್ಟು ದಿನ ಬೇಕು ಎಂದು ಬೇಸರದಿಂದಲೇ ಪುನಃ ಕೇಳಿದರು.

ಸುಸ್ಥಿರ ಸಮಿತಿ ರಚನೆಗೆ ಸೂಚನೆ

‘ನೀರಿನ ಮೂಲ ಸುಸ್ಥಿರ ಸಮಿತಿ ರಚಿಸಿ ನೀರಿನ ಜಲಮೂಲಗಳ ಮೂಲಕ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತದೆ’ ಎಂದು ಸಂಸದ ಸಾಗರ್‌ ಖಂಡ್ರೆ ಸಲಹೆ ನೀಡಿದರು. ಬೀದರ್‌ನಲ್ಲಿ ಕುಡಿಯುವ ನೀರಿನ ಪೂರೈಕೆಯು ದೊಡ್ಡ ಸಮಸ್ಯೆಯಾಗಿದೆ. ಜೆಜೆಎಮ್‌ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ರಾಮಲಿಂಗ ಬಿರಾದಾರ ಒಟ್ಟು 900 ಜನವಸತಿಗಳಲ್ಲಿ ಜೆಜೆಎಮ್‌ ಅನುಷ್ಠಾನಗಳಿಸಲಾಗುತ್ತಿದೆ. ಈ ಪೈಕಿ 327ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಭಾಲ್ಕಿಯ 63 ಮತ್ತು ಔರಾದ್‌ ತಾಲ್ಲೂಕಿನ 37 ಕಡೆಗಳಲ್ಲಿ ಶೀಘ್ರದಲ್ಲೇ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಜೆಜೆಎಮ್‌ ಕಾಮಗಾರಿಯನ್ನು ಈಗ ಬಹುಗ್ರಾಮ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೂರು ಕಡೆ ನೀರು ಪ್ರಯೋಗಾಲಯ ಕೇಂದ್ರಗಳಿದ್ದು ಕಾಲಕಾಲಕ್ಕೆ ನೀರಿನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.