ADVERTISEMENT

ಕುಟುಂಬಕ್ಕಿಂತ ಪಡಿತರ ಕಾರ್ಡ್‌ ಹೆಚ್ಚು!

ಬೀದರ್‌ ಜಿಲ್ಲೆಯಲ್ಲಿ ಶೇಕಡ 95ರಷ್ಟು ಜನರ ಬಳಿ ಇದೆ ‘ಬಿಪಿಎಲ್’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:38 IST
Last Updated 16 ಅಕ್ಟೋಬರ್ 2019, 19:38 IST

ಬೀದರ್‌: ಜಿಲ್ಲೆಯಲ್ಲಿ ಕುಟುಂಬಗಳ ಸಂಖ್ಯೆಗಿಂತ ಪಡಿತರ ಚೀಟಿಗಳ ಸಂಖ್ಯೆಯೇ ಅಧಿಕ ಇದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷೆಗೂ ಮೀರಿ ಪಡಿತರ ಚೀಟಿಗಳನ್ನು ವಿತರಿಸಿದರೂ ಮತ್ತೆ 17 ಸಾವಿರ ಜನ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವುದು ಜಿಲ್ಲಾ ಆಡಳಿತಕ್ಕೆ ತಲೆನೋವಾಗಿದೆ.

ಸಿರಿವಂತರು ಬಿಪಿಎಲ್‌ ಕಾರ್ಡ್‌ ಪಡೆದು ರಿಯಾಯಿತಿ ದರದಲ್ಲಿ ಪಡಿತರ ಒಯ್ಯುತ್ತಿದ್ದಾರೆ. ಬಡವರು ಅಕ್ಕಿಯನ್ನು ಆಹಾರಕ್ಕೆ ಬಳಸಿದರೆ, ಸ್ಥಿತಿವಂತರು ಪ್ರತಿ ಕೆ.ಜಿಗೆ ₹ 13ರಂತೆ ಮಾರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪ್ರಭಾವಿಗಳೇ ಬಿಪಿಎಲ್‌ ಕಾರ್ಡ್‌ ಹೊಂದಿದ್ದು, ಅನರ್ಹರು ಪಡಿತರ ಚೀಟಿಗಳನ್ನು ಪಡೆದಿರುವುದು ಪತ್ತೆ ಮಾಡುವುದು ಸವಾಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಕಾರ, ಜಿಲ್ಲೆಯಲ್ಲಿ 3,19,937 ಕುಟುಂಬಗಳಿವೆ. ಆದರೆ, ಇದಕ್ಕೂ ಹೆಚ್ಚು 3,49,287 ಪಡಿತರ ಚೀಟಿಗಳಿವೆ. ಬಹಳಷ್ಟು ಜನ ಬಡವರೆಂದು ಸುಳ್ಳು ಹೇಳಿ ಬಿಪಿಎಲ್‌ ಕಾರ್ಡ್ ಪಡೆದಿದ್ದಾರೆ.

ADVERTISEMENT

ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿರುವುದು ಶಿಕ್ಷಾರ್ಹ ಅಪರಾಧ. ಸರ್ಕಾರಕ್ಕೆ ವಂಚಿಸುವವರಿಂದ ಆಹಾರ ಧಾನ್ಯದ ಪೂರ್ಣ ಹಣ ವಸೂಲಿ, ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಬಹುದು. ಅನರ್ಹರು ಪಡೆದ ಬಿಪಿಎಲ್‌ ಕಾರ್ಡ್‌ಗಳನ್ನು ಸ್ವಯಂ ಪ್ರೇರಿತರಾಗಿ ಹಿಂದಿರುಗಿಸಲು ಸೆ.30ರ ವರೆಗೆ ಕಾಲಾವಕಾಶ ನೀಡಲಾಗಿತ್ತು. 100 ಜನ ಮಾತ್ರ ಪಡಿತರ ಚೀಟಿ ಮರಳಿಸಿದ್ದಾರೆ.

‘ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡದಿರುವ ಫಲಾನುಭವಿಗಳಿಗೆ ಪಡಿತರ ಹಂಚಿಕೆ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆದಿದೆ. ಈ ಕುರಿತು ಮೇಲಧಿಕಾರಿಗಳ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಬಾಬು ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬ್ಬಂದಿ ಹಿಂದೇಟು:ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಗೊತ್ತಿದ್ದರೂ ಸ್ಥಳೀಯ ರಾಜಕಾರಣಿಗಳಭಯದಿಂದ ಮೌನವಾಗಿದ್ದಾರೆ. ಪಡಿತರ ಚೀಟಿ ರದ್ದುಪಡಿಸಲು ಶಿಫಾರಸು ಮಾಡಿದ ತಕ್ಷಣ ಕೆಲವರು ಮದ್ಯ ಸೇವಿಸಿ ಪಂಚಾಯಿತಿ ಕಚೇರಿ ಮುಂದೆ ಬಂದು ದಾಂದಲೆ ನಡೆಸಿದ ಘಟನೆ ನಡೆದಿದೆ. ಹೀಗಾಗಿ ಪಡಿತರ ಚೀಟಿ ಸಮೀಕ್ಷೆಗೆ ಪಂಚಾಯಿತಿ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ.

ಯಾರು ಅನರ್ಹರು?: ಮಾಸಿಕ ₹ 10 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುತ್ತಿರುವ ಯಾವುದೇ ವ್ಯಕ್ತಿ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅನರ್ಹರು. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಶ್ರೀಮಂತರ ಮಾಹಿತಿ ಹಾಗೂ ದೂರುಗಳನ್ನು ಸಹಾಯವಾಣಿ 1967 ಅಥವಾ 18004259339 ನಂಬರ್‌ಗೆ ಕರೆ ಮಾಡಿ ನೀಡಬಹುದು.

**

ಕುಟುಂಬ ಸದಸ್ಯರ ಬೆರಳಚ್ಚು ಗುರುತು ಪಡೆದುಕೊಳ್ಳುವುದರಿಂದ ಅನಧಿಕೃತ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಬಹುದು.
- ಬಾಬುರೆಡ್ಡಿ, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.