ADVERTISEMENT

ಬೀದರ್‌: ಅತಿವೃಷ್ಟಿ ಹಾನಿಗೆ 15 ದಿನದೊಳಗೆ ಪರಿಹಾರ; ಖಂಡ್ರೆ ಆಶ್ವಾಸನೆ

ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 14:03 IST
Last Updated 28 ಸೆಪ್ಟೆಂಬರ್ 2025, 14:03 IST
<div class="paragraphs"><p>ಈಶ್ವರ ಬಿ.ಖಂಡ್ರೆ </p></div>

ಈಶ್ವರ ಬಿ.ಖಂಡ್ರೆ

   

ಬೀದರ್‌: ‘ಜಿಲ್ಲೆಯಾದ್ಯಂತ ಸತತ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ಬೆಳೆಗಳ ಜಂಟಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ, 15 ದಿನದೊಳಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಆಶ್ವಾಸನೆ ನೀಡಿದ್ದಾರೆ.

ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಮಾನವ ಜೀವ ಹಾನಿ, ಜಾನುವಾರುಗಳು ಸಾವನ್ನಪ್ಪಿವೆ. ಮನೆ ಹಾನಿ, ಬೆಳೆ ಹಾನಿ, ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲಾ ಹಾಗೂ ಅಂಗನವಾಡಿ ಕೊಠಡಿಗಳು, ವಿದ್ಯುತ್ ಸಂಪರ್ಕ, ಕೆರೆ, ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ. ಈ ಬಗ್ಗೆ ಪರಿಹಾರ ಕ್ರಮಗಳ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತುರ್ತು ಕ್ರಮಗಳನ್ನು ಕೈಗೊಳ್ಳುವ ಮೂಲಕ ಅತಿವೃಷ್ಟಿಯಿಂದ ಆಗಬಹುದಾದ ಅನಾಹುತಗಳನ್ನು ಕಡಿಮೆಗೊಳಿಸಲು ಸೂಚಿಸಿರುವೆ ಎಂದು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಅತಿವೃಷ್ಟಿ ನಿರ್ವಹಿಸಲು ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಕಾರ್ಯನಿರ್ವಹಿಸಲು ಹಾಗೂ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ರಜೆ ಮಂಜೂರು ಮಾಡದಿರಲು ಸೂಚಿಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಎಸ್‍ಡಿಆರ್‌ಎಫ್ ಮತ್ತು ಎನ್‍ಡಿಆರ್‌ಎಫ್ ಗಳನ್ನು ಕಾರ್ಯಸನ್ನದ್ಧಗೊಳಿಸಿ ವಿಳಂಬಕ್ಕೆ ಅವಕಾಶವಿಲ್ಲದಂತೆ ಪರಿಹಾರ ಕ್ರಮ ಕೈಗೊಳ್ಳಲಾಗವುದು ಎಂದಿದ್ದಾರೆ.

ಅತಿವೃಷ್ಟಿಯಾದ ಪ್ರದೇಶಗಳಗೆ ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಬೇಕು. ಹೆಚ್ಚು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಬಂಧಿಸಿದ ಇಲಾಖೆಗಳನ್ನು ಒಳಗೊಂಡ ತಂಡವು ಪರಿಸ್ಥಿತಿ ನಿಯಂತ್ರಿಸಲು ಖುದ್ದು ಮೊಕ್ಕಾಂ ಹೂಡಲು ಕ್ರಮ ವಹಿಸಬೇಕು. ಹಾನಿಗೊಳಗಾದ ಎಲ್ಲಾ ಬೆಳೆಗಳ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ಶೀಘ್ರವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಹ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಬದ್ಧವಾಗಿದೆ. ರೈತರೊಂದಿಗೆ ತಾವು ಮತ್ತು ಸರ್ಕಾರ ಸದಾ ಬೆಂಬಲಕ್ಕೆ ಇರುತ್ತದೆ. ಯಾರೂ ಆತಂಕಕ್ಕೆ ಒಳಗಾಗಬಾರದೆಂದು ಧೈರ್ಯ ತುಂಬಿದ್ದಾರೆ.

ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ಹಾಗೂ ಪ್ರವಾಹ ನಿರ್ವಹಣೆ ಕುರಿತು ಚರ್ಚಿಸಿ ಪರಾಮರ್ಸೆ ನಡೆಸಲು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಸೆ. 30ರಂದು ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾಯಿ ಹಾವಳಿ ತಡೆಗೆ ಸೂಚನೆ

ಬೀದರ್‌: ಇತ್ತೀಚಿಗೆ ಬೀದರ್‌ ತಾಲ್ಲೂಕಿನ ಬದಗಲ್ ಗ್ರಾಮದಲ್ಲಿ ಏಳು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಂಭೀರ ಗಾಯ ಉಂಟು ಮಾಡಿರುವುದು ವರದಿಯಾಗಿದೆ. ಈ ಬಾಲಕಿಗೆ ಜಿಲ್ಲಾಡಳಿತದಿಂದ ಸೂಕ್ತ ಚಿಕಿತ್ಸೆಯನ್ನು ಖಚಿತಪಡಿಸುವುದರೊಂದಿಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ನಿಯಂತ್ರಣ ಕ್ರಮ ಜಾರಿಗೊಳಿಸಲು ಸೂಚಿಸಲಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ಬೀದಿ ನಾಯಿಗಳಿಂದ ಸಾರ್ವಜನಿಕರ ಮೇಲೆ ದಾಳಿಯಾಗುತ್ತಿರುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಇತ್ತೀಚಿಗೆ ನ್ಯಾಯಾಲಯಗಳು ಕೂಡ ತೀವ್ರ ಕ್ರಮವಹಿಸಲು ನಿರ್ದೇಶನ ನೀಡಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.