
ಶಶಿಕಾಂತ ಎಸ್. ಶೆಂಬೆಳ್ಳಿ
ಬೀದರ್: ಜನರ ಬಹುವರ್ಷಗಳ ಬೇಡಿಕೆಯಾಗಿರುವ 360 ಡಿಗ್ರಿ ರಿಂಗ್‌ರೋಡ್ ಕಾಮಗಾರಿ ಪೂರ್ಣಗೊಳ್ಳುವ ಕಾಲ ಸನ್ನಿಹಿತ ಬಂದಿದೆ.
ನಗರದ ಹೈದರಾಬಾದ್ ರಸ್ತೆಯ ದೇವ ದೇವ ವನದಿಂದ ಚೌಳಿ ರಸ್ತೆಯ ತನಕ, ಕೊಳಾರ ಕೈಗಾರಿಕಾ ಪ್ರದೇಶದಿಂದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವರೆಗೆ ಈಗಾಗಲೇ ಕೆಲಸ ಪೂರ್ಣಗೊಂಡಿದೆ. ಪಶು ವಿವಿಯಿಂದ ಯದಲಾಪೂರ ಮೂಲಕ ಮನ್ನಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸಬೇಕಿದೆ. ಮನ್ನಳ್ಳಿ ರಸ್ತೆಯಿಂದ ದೇವ ದೇವ ವನದ ವರೆಗೆ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಉಳಿದಿದೆ.
ಪಶು ವಿವಿಯಿಂದ ಯದಲಾಪೂರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗದಲ್ಲಿಯೇ 200ರಿಂದ 300 ಮೀಟರ್‌ನಷ್ಟು ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
ಯದಲಾಪೂರ ಗ್ರಾಮದ ಹೊರವಲಯದಿಂದ ಮನ್ನಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಭಾಗದ ಶೇ 80ಕ್ಕೂ ಹೆಚ್ಚು ಜನ ಸ್ವಯಂಪ್ರೇರಣೆಯಿಂದ ರಸ್ತೆಗೆ ಜಮೀನು ಕೊಡಲು ಮುಂದೆ ಬಂದಿದ್ದಾರೆ ಎಂದು ಗೊತ್ತಾಗಿದೆ. 100 ಅಡಿ ಅಗಲದ ಚತುಷ್ಪಥ ರಸ್ತೆ ಹಾದು ಹೋದರೆ ತಮ್ಮ ಜಮೀನುಗಳು, ಲೇಔಟ್‌ಗಳಿಗೆ ಭಾರಿ ಬೆಲೆ ಬರಲಿದೆ ಎನ್ನುವುದು ಜನರ ನಂಬಿಕೆಯಾಗಿದೆ. ಇದು ರಿಂಗ್‌ರೋಡ್ ಹಾದು ಹೋಗಿರುವ ಇತರೆ ಕಡೆಗಳಲ್ಲಿ ಈಗಾಗಲೇ ಖಚಿತವಾಗಿದೆ.
ಇನ್ನು, ಮನ್ನಳ್ಳಿ ರಸ್ತೆಯಿಂದ ಚಿಟ್ಟಾ–ಗುನ್ನಳ್ಳಿ ಮೂಲಕ ದೇವ ದೇವ ವನದ ವರೆಗೆ ರಿಂಗ್‌ರೋಡ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಕೆಲಸ ಮಾಡುತ್ತಿದೆ.
ಮನ್ನಳ್ಳಿ ರಸ್ತೆಯಿಂದ ಚಿಟ್ಟಾಕ್ಕೆ ನೇರ ಸಂಪರ್ಕ ಸಾಧ್ಯವಾಗದಿದ್ದಲ್ಲಿ, ಅಮಲಾಪೂರ ರಸ್ತೆ ಮೂಲಕ ಸಿಂದೋಲ್ ಕಲ್ಯಾಣ ಮಂಟಪದ ವರೆಗೆ ಬಂದು, ಚಿಟ್ಟಾ ಕ್ರಾಸ್‌ನಿಂದ ಚಿಟ್ಟಾ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿರುವ ಹೌಸಿಂಗ್ ಬೋರ್ಡ್ ರಸ್ತೆ ಮೂಲಕ ಗುನ್ನಳ್ಳಿ, ಅಲ್ಲಿಂದ ದೇವ ದೇವ ವನದ ವರೆಗೆ ಸಂಪರ್ಕ ಕಲ್ಪಿಸಲು ಯೋಜಿಸಲಾಗುತ್ತಿದೆ.
ಈಗಾಗಲೇ ಚಿಟ್ಟಾ ಕ್ರಾಸ್‌ನಿಂದ ಚಿಟ್ಟಾ ಗ್ರಾಮದ ವರೆಗೆ ಚತುಷ್ಪಥ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಗಾಗಲೇ 1 ಕಿ.ಮೀ ರಸ್ತೆ ಕಾಮಗಾರಿ ಮುಗಿಯಲು ಬಂದಿದೆ. ಈಗ ಎರಡನೇ ಹಂತದಲ್ಲಿ ಚಿಟ್ಟಾ ವರೆಗೆ ರಸ್ತೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಈಗಾಗಲೇ ₹5 ಕೋಟಿ ಅನುದಾನವೂ ಮಂಜೂರಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ರಿಂಗ್‌ರೋಡ್ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಅಗತ್ಯ ಅನುದಾನವೂ ಮಂಜೂರು ಮಾಡಿಸಿದ್ದಾರೆ. ಯದಲಾಪೂರ–ಮನ್ನಳ್ಳಿ ರಸ್ತೆ ಮಧ್ಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗ ಬರುತ್ತದೆ. ಅದರ ಅನುಮತಿ ಕೂಡ ಕೊಡಿಸಲು ಮುಂದಾಗಿದ್ದಾರೆ. ಆದಕಾರಣ ಚುರುಕಿನ ಕೆಲಸ ನಡೆಯುತ್ತಿದ್ದು, ರಿಂಗ್‌ರೋಡ್ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಮತ್ತೆ ಭರವಸೆ ಮೂಡಿದೆ.
ಒಂದು ತಿಂಗಳಲ್ಲಿ ಬೀದರ್ ನಗರದ ಪ್ರಮುಖ ರಸ್ತೆಗಳೆಲ್ಲ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗುವುದು. ರಿಂಗ್‌ರೋಡ್ ಸೇರಿದಂತೆ ಇತರೆ ರಸ್ತೆಗಳು ಪ್ರಗತಿಯಲ್ಲಿದ್ದು ಏಪ್ರಿಲ್‌ನೊಳಗೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ.–ಶಿವಶಂಕರ ಕಾಮಶೆಟ್ಟಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯೂಡಿ
ಒಂದು ತಿಂಗಳಲ್ಲಿ ಪ್ರಮುಖ ರಸ್ತೆಗಳು ಫಳಫಳ...
ಬೀದರ್‌ನ ಶಹಾಪೂರ ಗೇಟ್‌ನಿಂದ ನೌಬಾದ್ ವರೆಗೆ ಔರಾದ್ ರಸ್ತೆಯ ನಾವದಗೇರಿಯಿಂದ ಗುಂಪಾ ತನಕ ರಸ್ತೆಯನ್ನು ಮಹಾನಗರಗಳನ್ನು ನಾಚಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿದೆ. ನಗರದ ಎರಡು ಪ್ರಮುಖ ಭಾಗಗಳು ಬಡಾವಣೆಗಳನ್ನು ಸಂಪರ್ಕ ಕಲ್ಪಿಸುವ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಿ ರಸ್ತೆ ವಿಭಜಕಗಳು ಹಾಗೂ ಗ್ರಿಲ್‌ಗಳನ್ನು ಅಳವಡಿಸಿ ಬಣ್ಣ ಬಳಿಯಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಉದಗೀರ್ ರಸ್ತೆಯಲ್ಲಿ ಫುಟ್‌ಪಾತ್ ನಿರ್ಮಿಸಲಾಗುತ್ತಿದೆ. ಅದೇ ರೀತಿ ಚೌಳಿ ರಸ್ತೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲೇ ಆ ಕೆಲಸ ಕೂಡ ಆರಂಭವಾಗಲಿದೆ ಎಂದು ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.