ADVERTISEMENT

ಬೀದರ್‌: ಭಾಲ್ಕಿ–ಹುಮನಾಬಾದ್‌ ರಸ್ತೆಯಲ್ಲಿ ದರೋಡೆಗೆ ಸಂಚು– ನಾಲ್ವರ ಬಂಧನ

ಮಾರಕಾಸ್ತ್ರಗಳು, 100 ಗ್ರಾಂ ಖಾರದ ಪುಡಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 9:15 IST
Last Updated 27 ಫೆಬ್ರುವರಿ 2024, 9:15 IST
   

ಬೀದರ್‌: ಭಾಲ್ಕಿ–ಹುಮನಾಬಾದ್‌ ರಸ್ತೆಯ ಧರಿ ಸಿದ್ದೇಶ್ವರ ಮಂದಿರದ ಬಳಿ ದರೋಡೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಬಂಧಿತ ಆರೋಪಿಗಳಿಂದ ಮಾರಕಾಸ್ತ್ರಗಳು ಹಾಗೂ 100 ಗ್ರಾಂ ಖಾರದ ಪುಡಿ ಜಪ್ತಿ ಮಾಡಲಾಗಿದೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಾರಣಾಂತಿಕ ಹಲ್ಲೆ, ಸುಲಿಗೆ, ಮನೆ ಕಳ್ಳತನ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದಾನೆ. ಹೋದ ವರ್ಷ ಆತನ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಜರುಗಿಸಲಾಗಿತ್ತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

‘ಐದು ಜನ ಆರೋಪಿಗಳು ಸೋಮವಾರ (ಫೆ.26) ತಡರಾತ್ರಿ ಭಾಲ್ಕಿ–ಹುಮನಾಬಾದ್‌ ರಸ್ತೆಯ ಧರಿ ಸಿದ್ದೇಶ್ವರ ಮಂದಿರದ ಬಳಿ ದರೋಡೆಗೆ ಸಂಚು ರೂಪಿಸಿದ್ದರು. ಆ ಭಾಗದಿಂದ ಸಂಚರಿಸುವ ವಾಹನಗಳನ್ನು ತಡೆದು, ಜನರನ್ನು ಹೆದರಿಸಿ ದರೋಡೆಗೆ ಯೋಜಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ಭಾಲ್ಕಿ ಗ್ರಾಮೀಣ ಠಾಣೆಯ ಪಿಎಸ್‌ಐ ಹಣಮಂತ ಹಾಗೂ ಸಿಬ್ಬಂದಿ ದಾಳಿ ನಡೆಸಿ ಐವರ ಪೈಕಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಟಕಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಕಲಂ 399, 402 ಮತ್ತು ಕಲಂ 25 ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ನಗದು ಬಹುಮಾನ ಘೋಷಿಸಲಾಗಿದೆ’ ಎಂದು ಮಂಗಳವಾರ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.