
ಬೀದರ್: ‘ಸರ್ದಾರ್ ವಲ್ಲಭಬಾಯಿ ಪಟೇಲ ಅವರು ದೇಶದ ಸಮಗ್ರತೆಯ ಶಿಲ್ಪಿ’ ಎಂದು ಉಡುಪಿಯ ಚಿಂತಕ ಪ್ರಕಾಶ ಮಲ್ಪೆ ಹೇಳಿದರು.
ಮೇರಾ ಯುವ ಭಾರತ್ ಹಾಗೂ ಜಿಲ್ಲಾಡಳಿತ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಏಕತಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘565 ಸಂಸ್ಥಾನಗಳನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲರಿಗೆ ಬ್ರಿಟಿಷರು ಬಹಳಷ್ಟು ಹಿಂಸೆ ನೀಡಿದ್ದರು. ಆದರೂ ಎದೆಗುಂದದೆ ಚಳವಳಿಯಲ್ಲಿ ತೊಡಗಿಸಿಕೊಂಡರು. ಬ್ರಿಟಿಷರ ದರ್ಪವನ್ನು ಮೆಟ್ಟಿನಿಂತರು. ಧಾರ್ಮಿಕ ಕಾರ್ಯಕ್ಕೆ ಸರ್ಕಾರದ ಅನುದಾನ ಸಿಗದು ಎಂದಾಗ, ಸೋಮನಾಥ ಮಂದಿರ ಪುನರುಜ್ಜೀವನಗೊಳಿಸಿ ಭಾರತದ ಆತ್ಮಗೌರವ ಕಾಪಾಡಿದರು’ ಎಂದು ತಿಳಿಸಿದರು.
ಏಕತಾ ನಡಿಗೆ: ನಗರದ ಬರೀದ್‍ಶಾಹಿ ಉದ್ಯಾನದಿಂದ ಕೇಂದ್ರ ಬಸ್ ನಿಲ್ದಾಣ, ಮಡಿವಾಳ ಮಾಚಿದೇವ ವೃತ್ತ, ರೋಟರಿ ಕನ್ನಡಾಂಬೆ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಕ್ರಾಸ್ ಮಾರ್ಗವಾಗಿ ರಂಗ ಮಂದಿರ ವರೆಗೆ ಏಕತಾ ನಡಿಗೆ ನಡೆಯಿತು.
ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ರಾಷ್ಟ್ರೀಯ ಯುವ ಪ್ರಶಸ್ತಿ ಪಡೆದ ಓಂಪ್ರಕಾಶ್ ರೊಟ್ಟೆ, ಪ್ರಭುಲಿಂಗ ಬಿರಾದಾರ, ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಶಿವಕುಮಾರ ಸ್ವಾಮಿ ಬಂಬುಳಗಿ, ಚನ್ನಬಸವ ಬಳತೆ, ಬೀದರ್ ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಅಧಿಕಾರಿ ರವೀಂದ್ರ ಗಬಾಡೆ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಪದವಿಪೂರ್ವ) ಚಂದ್ರಕಾಂತ ಶಹಾಬಾದಕರ್, ಮುಖಂಡರಾದ ಸೋಮನಾಥ ಪಾಟೀಲ, ರಾಜಶೇಖರ ನಾಗಮೂರ್ತಿ, ದೇವಿದಾಸ ಜೋಶಿ , ಸತೀಶ್ ಬೆಳಕೋಟೆ, ಸೋಮನಾಥ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.