
ಔರಾದ್ (ಬೀದರ್): ಪಟ್ಟಣದ ಬಸ್ ನಿಲ್ದಾಣ ಎದುರು ಶನಿವಾರ ನಸುಕಿನ ಜಾವ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 10 ಅಂಗಡಿಗಳು ಸುಟ್ಟು ಭಸ್ಮವಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಅನೀಲ ಮೀಸೆ, ಪ್ರಲ್ಹಾದ್, ಶಿವಕಾಂತ ಜೋಶಿ, ಅರ್ಜುನ, ಜಗನ್ನಾಥ ಚಿಟ್ಮೆ ಅವರ ಬಾಂಡೆ ಅಂಗಡಿಯಲ್ಲಿನ ಲೋಹದ ಪಾತ್ರೆಗಳು, ತಾಮ್ರ, ಹಿತ್ತಾಳೆ, ಸ್ಟೀಲ್, ಅಲ್ಯೂಮಿನಿಯಂ ಸೇರಿದಂತೆ ಮನೆ ಬಳಕೆ ಸಾಮಗ್ರಿಗಳೆಲ್ಲ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿವೆ.
ಶಿವಶಂಕರ ಮೀಸೆ ಅವರ ಹಾರ್ಡ್‌ವೇರ್ ಅಂಗಡಿ, ಮುಹಮ್ಮದ್ ಲಾಲ್ ಅಹ್ಮದ್ ಅವರ ತರಕಾರಿ ಅಂಗಡಿ, ಸುನೀಲ ಜೋಶಿ ಅವರ ಫರ್ನಿಚರ್ ಅಂಗಡಿ, ತಾನಾಜಿ ಅವರ ಫುಟ್ ವೇರ್, ಸತೀಶ್ ಹಾಗೂ ಬಾಲಾಜಿ ಅವರ ಕಿರಾಣಾ ಅಂಗಡಿಯಲ್ಲಿನ ಸಾಮಾನುಗಳು ಸುಟ್ಟು ಕರಕಲಾಗಿವೆ.
ಅಂಗಡಿಗಳಿಗೆ ಬೆಂಕಿ ಹತ್ತಿರುವುದನ್ನು ಗಮನಿಸಿದ ಜನ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಒಂದು ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸುವಷ್ಟರಲ್ಲಿ ಅದರಲ್ಲಿ ನೀರು ಮುಗಿದು ಹೋಗಿದೆ. ನಂತರ ನೀರು ತುಂಬಿಕೊಂಡು ಬರುವಷ್ಟರಲ್ಲಿ ಎಲ್ಲ ಅಂಗಡಿಗಳು ಸುಟ್ಟುಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಹಶೀಲ್ದಾರ್ ಮಹೇಶ್ ಪಾಟೀಲ, ಸಿಪಿಐ ರಘುವೀರಸಿಂಗ್ ಠಾಕೂರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತ ಅಂಗಡಿ ಮಾಲೀಕರಿಗೆ ಸಾಂತ್ವನ ಹೇಳಿದ್ದಾರೆ. ಈ ಬೆಂಕಿಯಿಂದ ಒಂದೊಂದು ಅಂಡಿಯಲ್ಲಿ ₹10ರಿಂದ ₹15 ಲಕ್ಷ ಮೇಲಿನ ವಸ್ತುಗಳಿಗೆ ಹಾನಿಯಾಗಿದ್ದು, ಪೊಲೀಸರು ಸಮಗ್ರ ಮಾಹಿತಿ ಸಂಗ್ರಹಿಸಲಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ತಹಶೀಲ್ದಾರ್ ಮಹೇಶ ಪಾಟೀಲ ತಿಳಿಸಿದ್ದಾರೆ.
ಈ ಘಟನೆಯಿಂದ ಅಂಗಡಿ ಮಾಲೀಕರಿಗೆ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಘಟನಾ ಸ್ಥಳದಲ್ಲಿ ಅಂಗಡಿ ಮಾಲೀಕರು ಕುಟುಂಬಸ್ಥರು, ಮಹಿಳೆಯರು ದುಃಖಭರಿತರಾಗಿ ಕಣ್ಣೀರಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.