ADVERTISEMENT

51 ಸಾವಿರ ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ

ಬಿತ್ತನೆ ಬೀಜ ವಿತರಣೆಗೆ ಶಾಸಕರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 15:37 IST
Last Updated 28 ಮೇ 2020, 15:37 IST
ಬೀದರ್ ತಾಲ್ಲೂಕಿನ ಜನವಾಡದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ರಹೀಂಖಾನ್ ಗುರುವಾರ ಚಾಲನೆ ನೀಡಿದರು
ಬೀದರ್ ತಾಲ್ಲೂಕಿನ ಜನವಾಡದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ರಹೀಂಖಾನ್ ಗುರುವಾರ ಚಾಲನೆ ನೀಡಿದರು   

ಜನವಾಡ: ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕ ರಹೀಂಖಾನ್ ಬೀದರ್ ತಾಲ್ಲೂಕಿನ ಜನವಾಡದ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ರೈತರಿಗೆ ವಿತರಿಸಲು ಬೀದರ್ ವಿಧಾನಸಭಾ ಕ್ಷೇತ್ರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ’ ಎಂದರು.

‘ರೈತರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬೇಕು. ಕೊರೊನಾ ಸೋಂಕಿನ ಕಾರಣ ರೈತ ಸಂಪರ್ಕ ಕೇಂದ್ರಗಳಿಗೆ ಹೋದಾಗ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ಎಂ.ಎ.ಕೆ. ಅನ್ಸಾರಿ ಮಾತನಾಡಿ, ಬೀದರ್ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಉದ್ದು, ಹೆಸರು ತಲಾ ಐದು 5 ಸಾವಿರ ಹೆಕ್ಟೇರ್, ತೊಗರಿ 11 ಸಾವಿರ ಹೆಕ್ಟೇರ್, ಸೋಯಾ ಅವರೆ 20 ಸಾವಿರ ಹೆಕ್ಟೇರ್, ಹೈಬ್ರೀಡ್ ಜೋಳ 4,500 ಹೆಕ್ಟೇರ್, ಮೆಕ್ಕೆ ಜೋಳ 800 ಹೆಕ್ಟೇರ್ ಹಾಗೂ ಭತ್ತ 1,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಇದೆ’ ಎಂದರು.

ಆರು ರೈತ ಸಂಪರ್ಕ ಕೇಂದ್ರ ಹಾಗೂ 18 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಬೀದರ್, ಬೀದರ್ ದಕ್ಷಿಣ, ಕಮಠಾಣ, ಬಗದಲ್, ಮನ್ನಳ್ಳಿ, ಜನವಾಡ ರೈತ ಸಂಪರ್ಕ ಕೇಂದ್ರ, ಗಾದಗಿ, ಚಿಲ್ಲರ್ಗಿ, ಅಷ್ಟೂರ, ಚಾಂಬೋಳ, ಮಂದಕನಳ್ಳಿ, ಹೊಕ್ರಾಣ (ಬಿ) ಹಾಗೂ ಮರಕುಂದಾ ಹೆಚ್ಚುವರಿ ಕೇಂದ್ರಗಳಲ್ಲಿ ಬೀಜ ವಿತರಣೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಮಾಳೆಗಾಂವ, ಕಪಲಾಪುರ, ಯದಲಾಪುರ, ನವಲಸಪುರ, ಅಲಿಯಂಬರ್, ಯರನಳ್ಳಿ, ಕಾಶೆಂಪುರ(ಪಿ), ರಂಜೋಳಖೇಣಿ, ರೇಕುಳಗಿ ಕೇಂದ್ರಗಳಲ್ಲಿ ಮುಂದಿನ ವಾರದಿಂದ ಬೀಜ ವಿತರಣೆ ಶುರು ಮಾಡಲಾಗುವುದು ಎಂದು ಹೇಳಿದರು.

ತಾಂತ್ರಿಕ ಅಧಿಕಾರಿ ಆರತಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ., ಡಾ.ಆರ್‌.ಎಲ್‌. ಜಾಧವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.