ADVERTISEMENT

ಬೀದರ್: ಮಳೆಯಲ್ಲೂ ಕ್ರೀಡಾಪಟುಗಳ ಸಾಮರ್ಥ್ಯ ಒರೆಗೆ

ಬೀದರ್‌ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:38 IST
Last Updated 13 ಸೆಪ್ಟೆಂಬರ್ 2025, 4:38 IST
ಗುಂಡು ಎಸೆತ ಸ್ಪರ್ಧೆ ಕಣ್ತುಂಬಿಕೊಳ್ಳಲು ಸೇರಿದ್ದ ಜನ
ಗುಂಡು ಎಸೆತ ಸ್ಪರ್ಧೆ ಕಣ್ತುಂಬಿಕೊಳ್ಳಲು ಸೇರಿದ್ದ ಜನ   

ಬೀದರ್‌: ಜಿಟಿಜಿಟಿ ಮಳೆಯಲ್ಲೂ ವಿದ್ಯಾರ್ಥಿ–ವಿದ್ಯಾರ್ಥಿನಿಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ, ಪ್ರತಿಭೆ ಒರೆಗೆ ಹಚ್ಚಿದರು.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಗರ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀದರ್‌ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

100 ಮೀಟರ್‌, 200 ಮೀಟರ್‌, 400 ಮೀಟರ್‌, 800 ಮೀಟರ್‌, 1,500 ಮೀಟರ್‌ ಅಥ್ಲೆಟಿಕ್ಸ್‌, ಲಾಂಗ್‌ ಜಂಪ್‌, ಹೈ ಜಂಪ್‌, ಟ್ರಿಪಲ್‌ ಜಂಪ್‌, ಶಾಟ್‌ಪುಟ್‌, ಡಿಸ್ಕಸ್‌ ಥ್ರೋ, ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಿದರು. ಜಿಟಿಜಿಟಿ ಮಳೆ ಲೆಕ್ಕಿಸದೇ ಎಲ್ಲಾ ಸ್ಪರ್ಧೆಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

ಡಿಡಿಪಿಯು ಚಂದ್ರಕಾಂತ ಶಹಾಬಾದಕರ್‌ ಉದ್ಘಾಟಿಸಿ, ಸೋಲು–ಗೆಲುವಿಗಿಂತ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಎಂದರು.

ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್‌ ಮೈಲಾರೆ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಬಹಳ ಮುಖ್ಯ ಎಂದು ಹೇಳಿದರು.

ಪ್ರಾಚಾರ್ಯ ಚಂದ್ರಪ್ಪ ಭತಮುರ್ಗೆ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಕ್ರಿಯಾಶೀಲರಾಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಪ್ರಭು ಎಸ್‌. ಧ್ವಜಾರೋಹಣ ಮಾಡಿದರು. ಓಂಕಾಂತ ಸೂರ್ಯವಂಶಿ, ವಿಜಯಕುಮಾರ ಪಾಟೀಲ, ವಿಜಯಕುಮಾರ ತೋರಣಕರ್‌, ಬಾಲಾಜಿ ವಾಡೇಕರ್‌, ಎಲಿಜಬೆತ್‌ ಸ್ವರೂಪರಾಣಿ, ರಾಜಶೇಖರ ಮಂಗಲಗಿ, ಸಂಜಯ್‌ ಜೆಸ್ಸಿ, ಧನರಾಜ ಖೇಣಿ, ನಾಗನಾಥ ಬಿರಾದಾರ, ಎಸ್‌.ಎಮ್‌. ಐನಾಪೂರ, ಬಸವರಾಜ ಹೆಗ್ಗೆ ಇದ್ದರು. ತಹರೇನ್‌ ಪ್ರಾರ್ಥನಾ ಗೀತೆ ಹಾಡಿದರು.

ಲಾಂಗ್‌ ಜಂಪ್‌ನಲ್ಲಿ ವಿದ್ಯಾರ್ಥಿಯೊಬ್ಬರು ಸಾಮರ್ಥ್ಯ ಒರೆಗೆ ಹಚ್ಚಿದ್ದು
ಜಯದ ದಡ ಸೇರಲು ಅಥ್ಲೆಟಿಕ್ಸ್‌ನಲ್ಲಿ ಅಂತಿಮ ಹಂತದ ಪ್ರಯತ್ನದಲ್ಲಿ ವಿದ್ಯಾರ್ಥಿಗಳು
ವಿದ್ಯಾರ್ಥಿನಿಯರ ವಿಭಾಗದ ಅಥ್ಲೆಟಿಕ್ಸ್‌ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.