ಬೀದರ್: ನಗರ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಭಾನುವಾರವೂ ವರುಣನ ಆರ್ಭಟ ಮುಂದುವರೆದಿದೆ.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಗುಡುಗು ಸಹಿತ ಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆಯಾಯಿತು. ಜೋರು ಮಳೆಗೆ ನಗರದ ಹರಳಯ್ಯಾ ವೃತ್ತ, ಹಳೆ ಬಸ್ ನಿಲ್ದಾಣ, ಹಾರೂರಗೇರಿ, ವಿದ್ಯಾನಗರ, ಕುಂಬಾರವಾಡ ಕ್ರಾಸ್, ಗುಂಪಾ ರಿಂಗ್‌ರೋಡ್ ಕ್ರಾಸ್‌ನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿತು. ಇದರ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿ, ನಿಧಾನವಾಗಿ ಸಂಚರಿಸಿದವು.
ಭಾನುವಾರ ನಗರದ ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ವಿವಿಧ ಕಡೆಗಳಿಂದ ಬಂದಿದ್ದ ಜನ ಮಳೆಯಲ್ಲಿ ನೆನೆದುಕೊಂಡರು. ತಾಲ್ಲೂಕಿನ ಚಿಟ್ಟಾ, ಘೋಡಂಪಳ್ಳಿ, ಅಮಲಾಪೂರ, ಯದಲಾಪೂರ, ಕಮಠಾಣ ಸೇರಿದಂತೆ ಹಲವು ಕಡೆಗಳಲ್ಲಿ ಜೋರು ಮಳೆ ಬಿದ್ದಿದೆ.
ನಾಲ್ಕೈದು ದಿನಗಳಿಂದ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವ ಕಾರಣ ಬೇಸಿಗೆ ಮರೆಸಿದೆ. ಸಂಪೂರ್ಣ ಮಳೆಗಾಲದಂತೆ ಭಾಸವಾಗುತ್ತಿದೆ. ವಾತಾವರಣ ಸಂಪೂರ್ಣ ತಂಪಾಗಿದ್ದು, ಗರಿಷ್ಠ ಉಷ್ಣಾಂಶ 32ರಿಂದ 34 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಬತ್ತಿ ಹೋಗಿದ್ದ ಜಲಮೂಲಗಳಲ್ಲಿ ಮತ್ತೆ ಜೀವ ಜಲ ಚಿಮ್ಮಿದೆ. ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಮಳೆ ಚುರುಕುಗೊಂಡ ಬೆನ್ನಲ್ಲೇ ಕೃಷಿ ಇಲಾಖೆಯು ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಹೆಚ್ಚಿಸಿಕೊಳ್ಳುತ್ತಿದೆ. ಮುಂದಿನ ವಾರದಿಂದ ಬೀಜ ವಿತರಣೆಗೆ ಸಿದ್ಧತೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.