ADVERTISEMENT

ಔರಾದ್ | ಸ್ಥಳಾಂತರವಾಗದ ಪಪಂ ಕಚೇರಿ: ಸಾರ್ವಜನಿಕರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಹೊಸದಾಗಿ ನಿರ್ಮಾಣಗೊಂಡ ಔರಾದ್ ಪಟ್ಟಣ ಪಂಚಾಯಿತಿ ಕಚೇರಿ 
ಹೊಸದಾಗಿ ನಿರ್ಮಾಣಗೊಂಡ ಔರಾದ್ ಪಟ್ಟಣ ಪಂಚಾಯಿತಿ ಕಚೇರಿ    

ಔರಾದ್: ಇಲ್ಲಿ ಹೊಸದಾಗಿ ನಿರ್ಮಾಣಗೊಂಡ ಕಟ್ಟಡಕ್ಕೆ ಪಟ್ಟಣ ಪಂಚಾಯಿತಿ ಕಚೇರಿ ಕಾರ್ಯ ಸ್ಥಳಾಂತರವಾಗದೆ ಜನರಿಗೆ ಕಿರಿಕಿರಿಯಾಗಿದೆ.

ಪಟ್ಟಣದ ಬೀದರ್ ರಸ್ತೆಯಲ್ಲಿ ಸುಮಾರು ₹1.5 ಕೋಟಿ ವೆಚ್ಚದಲ್ಲಿ ನೂತನ ಪಟ್ಟಣ ಪಂಚಾಯಿತಿ ನಿರ್ಮಾಣ ಆಗಿದೆ. ಎರಡು ತಿಂಗಳ ಹಿಂದೆ ಉದ್ಘಾಟನೆಯೂ ಆಗಿದೆ. ಆದರೆ ಕಚೇರಿ ಕೆಲಸ ಕಾರ್ಯ ಇನ್ನು ಪೂರ್ಣವಾಗಿ ಸ್ಥಳಾಂತರವಾಗದೆ ಜನರಿಗೆ ತೊಂದರೆಯಾಗಿದೆ.

‘ಎಲ್ಲ ವಿಭಾಗದ ಕಡತಗಳು, ಸಾಮಗ್ರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಕೌಂಟ್ ವಿಭಾಗ ಹಾಗೂ ಇಂಟರ್‌ನೆಟ್‌ ವಿಭಾಗದ ಕೆಲಸಗಳು ಹಳೆ ಕಟ್ಟಡದಲ್ಲೇ ನಡೆಯುತ್ತಿವೆ. ವಿದ್ಯುತ್, ನೆಟ್ ಸೌಲಭ್ಯ ಆದ ನಂತರ ಅಲ್ಲಿಗೆ ಹೋಗುತ್ತೇವೆ’ ಎಂದು ಪಟ್ಟಣ ಪಂಚಾಯಿತಿ ಲೆಕ್ಕಿಗ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

ADVERTISEMENT

‘ನಾವು ತೆರಿಗೆ ಕಟ್ಟಲು ಹೊಸ ಕಟ್ಟಡಕ್ಕೆ ಹೋಗಬೇಕು. ಇನ್ನು ಡಿಜಿಟಲ್ ಖಾತೆ, ಮ್ಯುಟೇಶನ್‌ಗಾಗಿ ಹಳೆ ಕಟ್ಟಡಕ್ಕೆ ಹೋಗಬೇಕು. ಹಳೆ ಮತ್ತು ಹೊಸ ಕಟ್ಟಡ ನಡುವೆ ಒಂದೂವರೆ ಕಿ.ಮೀ. ಅಂತರವಿದೆ. ಇದರಿಂದ ನಮಗೆ ವಿನಾ ಕಾರಣ ತೊಂದರೆಯಾಗುತ್ತಿದೆʼ ಎಂದು ಪಟ್ಟಣದ ಜನ ಅಸಮಾಧಾನ ಹೊರ ಹಾಕಿದ್ದಾರೆ.

‘ಪಟ್ಟಣ ಪಂಚಾಯಿತಿಗೆ ಹೊಸ ಕಟ್ಟಡ ಆಗಿದೆ. ಫರ್ನಿಚರ್ ಮಾಡಿಸಿದ್ದೇವೆ. ಎಲ್ಲ ವ್ಯವಸ್ಥೆಯೂ ಇದೆ. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ ಕಚೇರಿ ಕೆಲಸ ಪೂರ್ಣವಾಗಿ ಸ್ಥಳಾಂತರವಾಗಿಲ್ಲ’ ಎಂದು ಪಟ್ಟಣದ ಪಂಚಾಯಿತಿ ಸದಸ್ಯ ದಯಾನಂದ ಘುಳೆ ತಿಳಿಸಿದ್ದಾರೆ.

‘ಚುನಾವಣೆಯಿಂದಾಗಿ ಪಟ್ಟಣದ ಪಂಚಾಯಿತಿ ಕಚೇರಿ ಸ್ಥಳಾಂತರ ವಿಳಂಬ ಆಗಿರಬಹುದು. ಕೆಲ ದಿನಗಳ ಹಿಂದೆಯೇ ನಾನು ಆಡಳಿತಾಧಿಕಾರಿಯಾಗಿ ಅಧಿಕಾರ ತೆಗೆದುಕೊಂಡಿದ್ದೇನೆ. ಈ ಬಗ್ಗೆ ತಿಳಿದುಕೊಂಡು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆʼ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಹೊಸ ಕಟ್ಟಡಕ್ಕೆ ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಜನರ ತೊಂದರೆ ನಿವಾರಣೆ ಮಾಡಲಾಗುವುದು. ಮಲ್ಲಿಕಾರ್ಜುನ ಆಡಳಿತಾಧಿಕಾರಿ ಪಟ್ಟಣ ಪಂಚಾಯಿತಿ ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.