ADVERTISEMENT

ಸಹಜ ಸ್ಥಿತಿಯತ್ತ ಬೀದರ್‌ ಜಿಲ್ಲೆ

ಅಂತರ ಜಿಲ್ಲಾ ಸಾರಿಗೆ ಸೇವೆ ಆರಂಭ, ನಿಲ್ದಾಣದ ಒಂದೇ ದ್ವಾರದಲ್ಲಿ ನಿರ್ಗಮನ, ಆಗಮನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:28 IST
Last Updated 19 ಮೇ 2020, 15:28 IST
ಬೀದರ್‌ನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ಕಲಬುರ್ಗಿ ಹಾಗೂ ಭಾಲ್ಕಿ ಬಸ್‌ಗಳು
ಬೀದರ್‌ನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾದು ನಿಂತಿದ್ದ ಕಲಬುರ್ಗಿ ಹಾಗೂ ಭಾಲ್ಕಿ ಬಸ್‌ಗಳು   

ಬೀದರ್: ಎರಡು ತಿಂಗಳ ನಂತರ ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕು ಕೇಂದ್ರಗಳಿಂದ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸೋಮವಾರ ಆರಂಭವಾಯಿತು.

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆ 7 ಗಂಟೆಯ ವೇಳೆಗೆ ಕಲಬುರ್ಗಿ, ಹುಮನಾಬಾದ್, ಭಾಲ್ಕಿ ಹಾಗೂ ಔರಾದ್‌ಗೆ ತೆರಳಲು ಬಸ್‌ಗಳು ಬಂದು ನಿಂತಿದ್ದವು. ಕಲಬುರ್ಗಿಗೆ ಹೋಗುವವರು ಬಿಟ್ಟರೆ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರೇ ಬಂದಿರಲಿಲ್ಲ. ಕಲಬುರ್ಗಿ–ಬೀದರ್‌ ಮಧ್ಯೆಯೇ ಹೆಚ್ಚು ಬಸ್‌ಗಳು ಸಂಚರಿಸಿದವು.

ನಿಲ್ದಾಣದಲ್ಲಿ ಪ್ರಯಾಣಿಕರ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿದ ನಂತರ ಅವರಿಗೆ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ಬಸ್‌ನಲ್ಲಿ ಕೂಡಿಸಿ ಕಲಬುರ್ಗಿಗೆ ಕಳಿಸಲಾಯಿತು. ಮೊದಲ ಬಸ್ 8 ಗಂಟೆ ವೇಳೆಗೆ ತೆರಳಿದರೆ, ಇನ್ನೊಂದು ಬಸ್ 9ಕ್ಕೆ ಹಾಗೂ ಮತ್ತೊಂದು ಬಸ್ ಬೆಳಿಗ್ಗೆ 11 ಗಂಟೆಯ ವೇಳೆಗೆ ಕಲಬುರ್ಗಿಗೆ ಪ್ರಯಾಣ ಬೆಳೆಸಿತು.

ADVERTISEMENT

ಬೇರೆ ಜಿಲ್ಲೆಗಳಲ್ಲಿ ಸೋಮವಾರ ಸಂಜೆ 5 ಗಂಟೆಯ ವೇಳೆಗೆ ಬಸ್‌ ಸಂಚಾರಕ್ಕೆ ಜಿಲ್ಲಾಡಳಿತದಿಂದ ಅನುಮತಿ ದೊರೆತಿತ್ತು. ಆದರೆ, ಬೀದರ್‌ನಲ್ಲಿ ತಡ ಮಾಡಿ ಒಪ್ಪಿಗೆ ದೊರೆತ ಕಾರಣ ಬಹಳಷ್ಟು ಜನರಿಗೆ ಬಸ್‌ ಸಂಚಾರ ಆರಂಭವಾಗಿರುವ ಮಾಹಿತಿಯೇ ಇರಲಿಲ್ಲ. ಬಸ್‌ಗಳಲ್ಲಿ ಹುಮನಾಬಾದ್ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಿಬ್ಬಂದಿಯೇ ಅಧಿಕ ಸಂಖ್ಯೆಯಲ್ಲಿ ಇದ್ದರು.

‘ಮಂಗಳವಾರ ಕಲಬುರ್ಗಿ, ಹುಮನಾಬಾದ್, ಭಾಲ್ಕಿ ಹಾಗೂ ಔರಾದ್‌ಗೆ ಬಸ್‌ ಸಂಚಾರ ಆರಂಭವಾಗಿದೆ. ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದರೆ ಗ್ರಾಮೀಣ ಪ್ರದೇಶಕ್ಕೂ ಬಸ್ ಓಡಿಸಲಾಗುವುದು. ಕೋವಿಡ್ 19 ಸೋಂಕಿತರು ನಗರದಲ್ಲೇ ಹೆಚ್ಚಿರುವ ಕಾರಣ ನಗರ ಸಾರಿಗೆ ಸೇವೆಯನ್ನು ಆರಂಭಿಸಿಲ್ಲ’ ಎಂದು ಎನ್ಇಕೆಆರ್‌ಟಿಸಿಯ ಬೀದರ್‌ ವಿಭಾಗೀಯ ನಿಯಂತ್ರಣ ಅಧಿಕಾರಿ ಸಿ.ಎಸ್.ಫುಲೇಕರ್‌ ತಿಳಿಸಿದರು.

‘ಸಾರಿಗೆ ಸಂಸ್ಥೆಯ ಎಲ್ಲ ಬಸ್‌ ಚಾಲಕರು ಹಾಗೂ ನಿರ್ವಾಹಕರಿಗೆ ಮಾಸ್ಕ್, ಹ್ಯಾಂಡ್‌ ಗ್ಲೌಸ್‌ ಹಾಗೂ ಸ್ಯಾನಿಟೈಸರ್‌ ಕೊಡಲಾಗಿದೆ. ಬಸ್‌ಗಳಲ್ಲಿ ಸೀಟ್‌ಗಳ ಮೇಲೆ ಮಾರ್ಕ್‌ ಮಾಡಲಾಗಿದ್ದು, ಅದೇ ಆಸನದ ಮೇಲೆ ಕುಳಿತುಕೊಳ್ಳುವಂತೆ ಪ್ರಯಾಣಿಕರಿಗೂ ಸೂಚಿಸಲಾಗುತ್ತಿದೆ’ ಎಂದು ಹೇಳಿದರು.

ನಿಲ್ದಾಣದಲ್ಲಿ ಪ್ರತಿ ಟ್ರಿಪ್ ಬಳಿಕ ಬಸ್ಸಿನೊಳಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.